ಚೆನ್ನೈ: ರಾಷ್ಟ್ರೀಯ ಹೆದ್ದಾರಿಯ ಕಾಂಚೀಪುರಂ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರನ್ನು ರತ್ನಾ(28), ರಾಜಲಕ್ಷ್ಮಿ(5), ತೇಜಶ್ರೀ(3), ಹೆಸರಿಡದ ಮೂರು ತಿಂಗಳ ಮಗ ಹಾಗೂ ರಾಜೇಶ್(29) ಎಂದು ಗುರುತಿಸಲಾಗಿದ್ದು, ರಾಮಜೇಯಂ(35) ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾನೆ.
ರಾಮಜೇಯಂನ ಪತ್ನಿ ರತ್ನಾ, ಮಕ್ಕಳ ಬೇಸಿಗೆ ರಜೆಯ ಸಲುವಾಗಿ ಚೆನ್ನೈ ಬಳಿಯ ರೆಟ್ಟೇರಿಯಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದಳು. ಈ ವೇಳೆ ಆಕೆ ಮೂರನೇ ಮಗುವಿಗೆ ಜನ್ಮವನ್ನು ನೀಡಿದ್ದಳು. ಹಿರಿಯ ಮಗಳು ರಾಜಲಕ್ಷ್ಮಿ ಶಾಲೆ ಸೋಮವಾರ ಪುನರಾರಂಭಗೊಳ್ಳಲಿರುವ ಕಾರಣ ಇಡೀ ಕುಟುಂಬವು ತಮ್ಮ ಊರಿಗೆ ಪ್ರಯಾಣ ಬೆಳೆಸಿತ್ತು.
ಮಧ್ಯರಾತ್ರಿಯ ಸುಮಾರಿಗೆ, ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಚಲಿಸುವಾಗ ಕಾರಿನ ಮುಂಭಾಗದ ಚಕ್ರ ಸ್ಫೋಟಗೊಂಡಿತು. ಈ ವೇಳೆ ನಿಯಂತ್ರಣವನ್ನು ಕಳೆದುಕೊಂಡ ವಾಹನವು ರಸ್ತೆಯ ಪಕ್ಕದಲ್ಲಿ ನಿಂತಿದ್ದ ಸರಕು ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.