ಮೈಸೂರು: ಶಿಶುಗಳ ಲಾಲನೆ, ಪಾಲನೆ ಮುಖ್ಯವಾಗಿದ್ದು, ಮೃಗಾಲಯಕ್ಕೆ ಬರುವ ತಾಯಂದಿರಿಗೆ ಮಕ್ಕಳಿಗೆ ಹಾಲುಣಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಿರುವುದು ಶ್ಲಾಘನೀಯ ಕಾರ್ಯ ಎಂದು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಮೈಸೂರು ಅಮಿಟಿ ಲೇಡಿಸ್ ಸರ್ಕಲ ೧೦೮ರಿಂದ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ನಿರ್ಮಿಸಿರುವ ಶಿಶು ಆರೈಕೆ ಕೊಠಡಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸಿ ತಾಣವಾಗಿರುವ ಮೈಸೂರಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದು, ಅರಮನೆ ಬಿಟ್ಟರೆ ಮೃಗಾಲಯಕ್ಕೆ ಹೆಚ್ಚು ಜನ ಬರುತ್ತಾರೆ. ಚಿಕ್ಕ ಮಕ್ಕಳನ್ನು ಕರೆತರುವುದರಿಂದ ತಾಯಂದಿರಿಗೆ ಮಗುವಿಗೆ ಹಾಲುಣಿಸಲು ಸೂಕ್ತ ಜಾಗದ ವ್ಯವಸ್ಥೆ ಅಗತ್ಯ ಇತ್ತು ಎಂದು ಅಭಿಪ್ರಾಯಪಟ್ಟರು.
ಮೃಗಾಲಯದಲ್ಲಿ ಈಗಾಗಲೇ ಎರಡು ಇಂತಹ ಶಿಶು ಆರೈಕೆ ಕೊಠಡಿಗಳು ಇದ್ದು, ಈಗ ಮತ್ತೊಂದು ಕೊಠಡಿ ನಿರ್ಮಿಸಿರುವುದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವರಿಗೆಲ್ಲ ಅನುಕೂಲ ಆಗಲಿದೆ. ಇದು ಒಂದು ವಿನೂತನ ಪ್ರಯತ್ನವಾಗಿದ್ದು, ಇದಕ್ಕಾಗಿ ಮೈಸೂರು ಅಮಿಟಿ ಲೇಡಿಸ್ ಸರ್ಕಲ ಅನ್ನು ಅಭಿನಂದಿಸುತ್ತಾನೆ ಎಂದರು.
ಮೈಸೂರಿನ ಆರ್ಥಿಕತೆ ಮುಂದುವರೆಯುತ್ತಿರುವುದು ಪ್ರವಾಸೋದ್ಯಮದಿಂದಲೇ. ಹಾಗಾಗಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಮಾಹಿತಿ ನೀಡಬೇಕಿದೆ. ನಮ್ಮ ಪೂರ್ವಜರು ಸ್ಥಾಪನೆ ಮಾಡಿರುವ ಮೃಗಾಲಯ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆಯುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮೈಸೂರು ಅಮಿಟಿ ಲೇಡಿಸ್ ಸರ್ಕಲ ಅಧ್ಯಕ್ಷೆ ಅಪರ್ಣ ರಂಗ ಅವರು ಮಾತನಾಡಿ, ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಬರುತ್ತಾರೆ. ಹಾಗಾಗಿ ಮಕ್ಕಳಿಗೆ ಹಾಲುಣಿಸಲು ಆರೈಕೆ ಮಾಡಲು ಸೂಕ್ತ ಕೊಠಡಿಗಳ ಅಗತ್ಯ ಇತ್ತು. ಅದಕ್ಕಾಗಿ ನಮ್ಮ ಮೈಸೂರು ಅಮಿಟಿ ಲೇಡಿಸ್ ಸರ್ಕಲನಿಂದ ಅಂದಾಜು ೧೧ ಲಕ್ಷ ರೂ. ವೆಚ್ಚದಲ್ಲಿ ಈ ಶಿಶು ಆರೈಕೆ ಕೇಂದ್ರ ನಿರ್ಮಿಸಲಾಗಿದೆ. ಜಾಗ ನೀಡಿ ಸಹಕರಿಸಿ ಮೃಗಾಲಯ ಪ್ರಾಧಿಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ರಾಜವಂಶಸ್ಥೆ ತ್ರಿಷಿಕಾ ಕುಮಾರಿ ದೇವಿ, ಮೃಗಾಲಯ ನಿರ್ದೇಶಕ ಡಿ.ಮಹೇಶ್‌ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.