ಮೈಸೂರು: ಯೋಗದ ತವರೂರು ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟ ಯೋಗ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕೆಂದು ಎಂದು ಹೊಸದಿಲ್ಲಿಯ ಮೊರಾರ್ಜಿ ದೇಸಾಯಿ ಯೋಗ ಕೇಂದ್ರದ ನಿರ್ದೇಶಕ ಡಾ.ಈಶ್ವರ್ ವಿ.ಬಸವರೆಡ್ಡಿ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜೆಎಸ್‌ಎಸ್ ವೈದ್ಯಕೀಯ ಕಾಲೇಜು, ಜೆಎಸ್‌ಎಸ್ ಫಿಸಿಯೋಥೆರಪಿ ಕಾಲೇಜು, ಜೆಎಸ್‌ಎಸ್ ವಾಕ್ ಶ್ರವಣ ಸಂಸ್ಧೆ, ಜೆಎಸ್‌ಎಸ್ ಶುಶ್ರೂಷ ಕಾಲೇಜು ಹಾಗೂ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉನ್ನತಿ-೨೦೨೩ ನರರೋಗಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಯೋಗಕ್ಕೆ ಕರ್ನಾಟಕ ತನ್ನದೆ ಕೊಡುಗೆ ನೀಡಿದೆ. ಸಾಕಷ್ಟು ಯೋಗ ವಿದ್ವಾನ್‌ಗಳನ್ನು ಕರುನಾಡು ವಿಶ್ವಕ್ಕೆ ನೀಡಿದೆ. ಈ ನಿಟ್ಟಿನಲ್ಲಿ ಸುತ್ತೂರು ಶ್ರೀಗಳ ಸಹಕಾರದಲ್ಲಿ ಮೈಸೂರಿನಲ್ಲಿ ಯೋಗ ವಿವಿ ಸ್ಥಾಪನೆ ಆಗಬೇಕು. ಯೋಗಪಟುಗಳಿಗೆ ಪ್ರಯೋಜನ ಉಂಟಾಗಬೇಕು. ಉನ್ನತ ಶಿಕ್ಷಣದ ರೂಪದಲ್ಲಿ ಈ ಸೇವೆ ದೊರೆಯಬೇಕೆಂದು ಆಶಿಸಿದರು.
ಭವಿಷ್ಯದಲ್ಲಿ ಆಯುರ್ವೇದ ಔಷಧ ಆರೋಗ್ಯ ಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಚೀನಾದಲ್ಲಿ ಕ್ಯಾನ್ಸರ್‌ಗೆ ರೋಗಕ್ಕೆ ಶೇ.೭೦ರಷ್ಟು ಜನ ಆಧುನಿಕ ಔಷಧ ಬಳಸಿದರೆ, ಶೇ.೩೦ರಷ್ಟು ಮಂದಿ ಸಾಂಪ್ರದಾಯಿಕ ಔಷಧಗಳನ್ನು ಉಪಯೋಗಿಸುತ್ತಾರೆ. ಆಯುರ್ವೇದ, ಸಂಯೋಜಿತ ಚಿಕಿತ್ಸೆಗಳು ಮನುಕುಲಕ್ಕೆ ಆಶಾಕಿರಣವಾಗಿದೆ ಎಂದರು.
ಭಾರತ ವಿಶ್ವದ ಯೋಗಗುರು. ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಇಂದಿನ ಒತ್ತಡ ಪ್ರಪಂಚದಲ್ಲಿ ಯೋಗ ಅತ್ಯಂತ ಪೂರಕವಾದ ಮನೋನಿಗ್ರಹ ಮಾರ್ಗೋಪಾಯವಾಗಿದೆ. ಅಲ್ಲದೆ ನರಮಂಡಲ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ಚಿಕಿತ್ಸಾ ಅವಧಿಯಲ್ಲಿ ಸಂಯೋಜಿತ ಚಿಕಿತ್ಸಾ ಪದ್ಧತಿಗಳಲ್ಲಿ ಯೋಗವನ್ನು ಕೇಂದ್ರೀಕರಿಸಿ ಮನೋ ಇಂದ್ರೀಯಗಳನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆ ನೀಡಿದರೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.
ನಾವು ಆಧುನಿಕ ಚಿಕಿತ್ಸೆ ಜತೆಗೆ ನಮ್ಮ ಸಾಂಪ್ರದಾಯಿಕ ಚಿಕಿತ್ಸೆ ಬಗ್ಗೆಯೂ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಆಯುಷ್ ಇಲಾಖೆಯನ್ನು ಅಭಿವೃದ್ಧಿ ಪಡಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಪ್ರಯತ್ನಿಸುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಈ ನಿಟ್ಟಿನಲ್ಲಿ ಬಲಪಡಿಸಲಾಗುತ್ತಿದೆ. ಹಳ್ಳಿಗಳಿಗೂ ಯೋಗ ಕಾಲಿಡಬೇಕಿದೆ, ಜಗೃತಿ ಮೂಡಿಸಬೇಕಿದೆ. ಯೋಗ ಮತ್ತು ಆಯುರ್ವೇದ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಹಕರಿಸುತ್ತದೆ ಎಂದರು.
ವಿಚಾರ ಸಂಕಿರಣದಲ್ಲಿ ೩೮ ಆರೋಗ್ಯ ವಿಜ್ಞಾನ ಸಂಸ್ಥೆಗಳಿಂದ, ದೇಶದ ವಿವಿಧ ರಾಜ್ಯಗಳಿಂದ ೫೫೦ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ೨೧೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ೩೦ಕ್ಕೂ ಹೆಚ್ಚು ಸಂಶೋಧನಾ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಯಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್ ಮಠ್, ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸರ್ಬೇಸ್ವರ್ ಕರ್, ಸಂಘಟನಾ ಕಾರ್ಯದರ್ಶಿ ಡಾ.ವೀಣಾ ಜಿ.ರಾವ್, ಆರ್.ಮಹೇಶ್ ಸೇರಿದಂತೆ ಇತರರು ಇದ್ದರು.
ಕೋಟ್
ಇಂದು ಆರೋಗ್ಯ ಸೇವೆಯಲ್ಲಿ ನಾನಾ ಪ್ರಯೋಗಗಳು ಆಗುತ್ತಿವೆ. ಕೋವಿಡ್ ಸಮಯದಲ್ಲೂ ಫಾರ್ಮಸಿ ಕೇಂದ್ರಗಳು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿತ್ತು. ಜೆಎಸ್‌ಎಸ್ ವಿದ್ಯಾಸಂಸ್ಥೆ ನಾನಾ ಕೋರ್ಸ್‌ಗಳನ್ನು ಆರಂಭಿಸಿದೆ. ಕಲಿಕೆ ಚಲನಶೀಲತೆ ಹೇಳುತ್ತದೆ. ಆಧುನಿಕ ತಂತ್ರಗಳು ಸದಾ ನಮ್ಮನ್ನು ಕಾಯುತ್ತವೆ. ಹಾಗೆಂದು ನಮ್ಮ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳನ್ನು ಮರೆಯಬಾರದು.
-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಶ್ರೀ