
ಮೈಸೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ನಾಳೆ ಅಧಿಕೃತ ಚಾಲನೆ ದೊರೆಯಲಿದ್ದು, ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯ ವ್ಯಾಪ್ತಿಯೊಳಗೆ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಿರುವ ಶಕ್ತಿ ಯೋಜನೆಗೆ ನಾಳೆ ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ಮಧ್ಯೆ ಆಯಾ ಜಿಲ್ಲಾ ಕೇಂದ್ರದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಅಧಿಕಾರಿಗಳು ಕಾರ್ಯಕ್ರಮ ಆಯೋಜಿಸಲು ಕೇಂದ್ರ ಕಚೇರಿಯಿಂದ ಆದೇಶ ಹೊರಡಿಸಲಾಗಿದ್ದು, ಆದೇಶ ಬೆನ್ನಲ್ಲೇ ಕಾರ್ಯಕ್ರಮ ಆಯೋಜಿಸಲು ಆಯಾ ಜಿಲ್ಲೆಯಗಳಲ್ಲಿನ ವಿಭಾಗೀಯ ಅಧಿಕಾರಿಗಳು ಸಕಲ ಸಿದ್ದತೆ ನಡೆಸಿದ್ದಾರೆ.
ಮೈಸೂರಿನಲ್ಲೂ ಜೂನ್ ೧೧ರಂದು ಶಕ್ತಿ ಯೋಜನೆ ಚಾಲನೆಗೆ ಸಿದ್ದತೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿದ ವಿಭಾಗೀಯ ಅಧಿಕಾರಿ ಮರೀಗೌಡ, ಮೈಸೂರಿನ ನಗರ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತದೆ. ಶಿಷ್ಟಾಚಾರದ ಪ್ರಕಾರ ಎಲ್ಲಾ ರಾಜಕೀಯ ನಾಯಕರನ್ನು ಆಹ್ವಾನಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಇಬ್ಬರಿಗೂ ಆಹ್ವಾನ ನೀಡಲಾಗಿದೆ. ಇಬ್ಬರಲ್ಲಿ ಯಾರಾದರೂ ಒಬ್ಬರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಿಸುತ್ತೇವೆ. ಜತೆಗೆ ನಮ್ಮ ಸಿಬ್ಬಂದಿಗೂ ಕೂಡ ವಿಶೇಷ ತರಬೇತಿ ಶಿಬಿರ ಆಯೋಜನೆ ಮಾಡಲಾಗುತ್ತಿದೆ ಎಂದರು.
ಇಟಿಎಂ ಮಷಿನ್‌ಗಳನ್ನು ಯಾವ ರೀತಿ ಬಳಸಬೇಕು. ಮಹಿಳೆಯರೊಂದಿಗೆ ಹೇಗೆ ಸೌಜನ್ಯವಾಗಿ ನಡೆದುಕೊಳ್ಳಬೇಕು? ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಳ್ಳಬಾರದು ಎಂದು ಈಗಾಗಲೇ ಎಲ್ಲಾ ಸಿಬ್ಬಂದಿಗಳಿಗೂ ಸೂಚನೆ ನೀಡಲಾಗಿದೆ. ಜತೆಗೆ ಸಿಬ್ಬಂದಿಗಳಿಗೆ ಚಾಲಕ ನಿರ್ವಹಕರಿಗೆ ಪ್ರತಿದಿನ ಸಿಗುತ್ತಿದ್ದ ಇನ್ಸೆಂಟಿವ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಮೇಲ್ಮಟ್ಟದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.