ಮೈಸೂರು: ೫ ವರ್ಷಗಳ ಹಿಂದೆಯೇ ಉದ್ಘಾಟನೆಗೊಂಡಿದ್ದ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಜಿಧಿಕಾರಿ ಕಚೇರಿ ಸ್ಥಳಾಂತರಗೊಂಡಿದ್ದು, ಗುರುವಾರದಿಂದಲೇ ಹೊಸ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಕಾರ್ಯಾರಂಭ ಮಾಡಿದರು.
ಈ ಮೂಲಕ ನಗರದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ ಹಲವು ದಶಕಗಳಿಂದ ಜಿಧಿಕಾರಿ ಕಚೇರಿಯ ಕಟ್ಟಡವಾಗಿದ್ದ ಹಳೆಯ ಕಚೇರಿ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತುಸಂಗ್ರಹಾಲಯವಾಗಿ ಮಾರ್ಪಡಲಿದೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ತಿ.ನರಸೀಪುರ ಮುಖ್ಯ ರಸ್ತೆಯಲ್ಲಿನ ಸಿದ್ದಾರ್ಥನಗರ ಬಡಾವಣೆಯಲ್ಲಿ ೧೫ ಎಕರೆ ವಿಶಾಲ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಆಗಿನ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯ ಅವರು ೨೦೧೬ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಎರಡು ಅಂತಸ್ತಿನಲ್ಲಿರುವ ಈ ಭವ್ಯ ಕಟ್ಟಡ ೫ ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದೆ. ಮೊದಲ ಅಂತಸ್ತಿಗೆ ೫೬ ಕೋಟಿ ರೂ. ಹಾಗೂ ೨ನೇ ಅಂತಸ್ತು ನಿರ್ಮಾಣಕ್ಕೆ ೫೨ ಕೋಟಿ ರೂ. ಸೇರಿದಂತೆ ಒಟ್ಟು ೧೦೮ ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟಡವನ್ನು ೨೦೧೮ರ ಹೊತ್ತಿಗೆ ನಿರ್ಮಾಣ ಮಾಡಲಾಗಿತ್ತು.
ಬಳಿಕ ೨೦೧೮ರ ಮಾರ್ಚ್‌ನಲ್ಲಿ ಸಿದ್ದರಾಮಯ್ಯವರೆ ನೂತನ ಕಟ್ಟಡ ಉದ್ಘಾಟಿಸಿದ್ದರಾದರೂ, ತಮ್ಮ ಸರ್ಕಾರ ಹೋಗಿ ಸಮ್ಮಿಶ್ರ ಸರ್ಕಾರ, ಬಳಿಕ ಬಿಜೆಪಿ ಸರ್ಕಾರ ಬಂದರೂ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರವಾಗಿರಲಿಲ್ಲ. ಆದರೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದೆರೆಡು ವಾರ ಕಳೆಯುತ್ತಿದ್ದಂತೆ ಹೊಸ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಗೊಂಡಿದೆ. ಈ ಮೂಲಕ ಉದ್ಘಾಟನೆಗೊಂಡು ಅನುಪಯುಕ್ತವಾಗಿ ಉಳಿದಿದ್ದ ಕಟ್ಟಡದಲ್ಲಿ ಜಿಲ್ಲಾಧಿಕಾರಿಗಳು ಕಾರ್ಯಾರಂಭ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಧಿಕಾರಿ ಕಚೇರಿಯ ಹೊಸ ಕಟ್ಟಡವನ್ನು ೨೦೧೮ರಲ್ಲಿ ನಿರ್ಮಿಸಲಾಗಿತ್ತು. ಬಹಳ ದಿನಗಳ ಹಿಂದೆಯೇ ಇಲ್ಲಿಗೆ ಕಚೇರಿ ಸ್ಥಳಾಂತರವಾಗಬೇಕಿತ್ತು. ವಿಧಾನಸಭೆ ಚುನಾವಣೆ ಕಾರ್ಯಚಟುವಟಿಕೆಗಳು ಚುರುಕಾದ ಹಿನ್ನೆಲೆ ಕೆಲಸದ ಒತ್ತಡದಲ್ಲಿ ಸ್ಥಳಾಂತರಿಸಲು ಸಾಧವಾಗಿರಲಿಲ್ಲ. ಮುಖ್ಯಮಂತ್ರಿಗಳ ಆದೇಶ ಹಿನ್ನೆಲೆ ಗುರುವಾರ ಅಧಿಕೃತವಾಗಿ ಕಚೇರಿ ಸ್ಥಳಾಂತರಿಸಲಾಗಿದೆ. ಡಿಸ್ಟ್ರಿಕ್ ಹರ್ಬನ್ ಡೆವಲಪ್ಮೆಂಟ್ ಸೆಲ್, ಡೆಪ್ಯೂಟಿ ಡೈರೆಕ್ಟರ್ ಆಫ್ ಲ್ಯಾಂಡ್ ರೆಕಾರ್ಡ್ಸ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಯ ಕಚೇರಿಗಳು ಹಿಂದೆಯೇ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು, ಆದರೆ ಇಂದು ಜಿಧಿಕಾರಿಯ ಬಹುತೇಕ ಕಚೇರಿಗಳು ಸ್ಥಳಾಂತರವಾಗಿವೆ ಎಂದರು.
ವಸ್ತು ಸಂಗ್ರಹಾಲಯವಾಗಲಿದೆ ಹಳೆಯ ಕಟ್ಟಡ : ಹಲವು ದಶಕಗಳಿಂದ ಮೈಸೂರಿನ ಜಿಧಿಕಾರಿ ಕಚೇರಿಯ ಕಟ್ಟಡವಾಗಿದ್ದ ಈ ಪಾರಂಪರಿಕ ಕಟ್ಟಡ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ವಸ್ತು ಸಂಗ್ರಹಾಲಯವಾಗಿ ಮಾರ್ಪಡಲಿದೆ. ೧೨೮ ವರ್ಷ ಹಳೆಯದಾಗಿರುವ ಈ ಪಾರಂಪರಿಕ ಕಟ್ಟಡವನ್ನು ಕೃಷ್ಣರಾಜ ಬುಲೇವಾರ್ಡ್ ಅವರು ೧೮೯೫ರಲ್ಲಿ ನಿರ್ಮಾಣ ಮಾಡಿದ್ದರು. ಅಂದಿನ ಮೈಸೂರು ಅರಸರಾಗಿದ್ದ ೧೦ನೇ ಚಾಮರಾಜ ಒಡೆಯರ್ ಅವರು ಕಟ್ಟಡದಲ್ಲಿ ಪ್ರಜಾಪ್ರತಿನಿಧಿಗಳ ಸಭೆ ನಡೆಸಲು ಬಳಸುತ್ತಿದ್ದರು. ನಂತರ ಈ ಕಟ್ಟಡವನ್ನು ಮೈಸೂರು ಪ್ರಾಂತ್ಯದ ಅಂದಿನ ಅರಸರ ಮುಖ್ಯ ಆಯುಕ್ತರ ಕಚೇರಿಯಾಗಿ ಬಳಕೆ ಮಾಡಿಕೊಳ್ಳಲಾಯಿತು. ಬಳಿಕ ಸ್ವತಂತ್ರ ಭಾರತದಲ್ಲಿ ವಿಭಾಗಾಧಿಕಾರಿಗಳ ಕಚೇರಿ ಈ ಕಟ್ಟಡದಲ್ಲಿತ್ತು. ನಂತರ ಜಿಲ್ಲಾಧಿಕಾರಿ ಕಚೇರಿಯಾಗಿ ಮಾರ್ಪಟ್ಟಿತು.
ಪಾರಂಪರಿಕ ಕಟ್ಟಡವಾಗಿರುವ ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಸಧಕ್ಕೆ ವಸ್ತು ಸಂಗ್ರಹಾಲಯ ಮಾಡಲು ನಿಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನವರೇ ಆಗಿರುವುದರಿಂದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿದ್ದ ಜಿಧಿಕಾರಿ ಕಚೇರಿಯನ್ನು ಕಂದಾಯ ಇಲಾಖೆಯ ವಸ್ತು ಸಂಗ್ರಹಾಲಯ ಮಾಡಿ, ಕಂದಾಯ ಇಲಾಖೆಯ ಹಳೇ ದಾಖಲೆಗಳು, ಇಲಾಖೆಗಳ ವಿಷಯಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.