ಮೈಸೂರು: 'ಹಾಡುಪಾಡು ರಾಮೂ' ಎಂದೇ ಜನಪ್ರಿಯರಾಗಿದ್ದ ಪತ್ರಕರ್ತ ಮತ್ತು ಕವಿ ಟಿ.ಎಸ್.ರಾಮಸ್ವಾಮಿ (69) ಅವರು ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. 'ರಾಮೂ' ಎಂದೇ ಖ್ಯಾತರಾಗಿದ್ದ ಕವಿ ಟಿ.ಎಸ್.ರಾಮಸ್ವಾಮಿ ಅವರ ಅನಿರೀಕ್ಷಿತ ಸಾವು ನನ್ನನ್ನು ಆಘಾತಕ್ಕೀಡು ಮಾಡಿದೆ. ಮೈಸೂರಿನ ಸಾಹಿತ್ಯ, ಸಾಂಸ್ಕೃತಿಕ ಮತ್ತು ಮಾಧ್ಯಮ ಕ್ಷೇತ್ರ ರಾಮು ಅವರ ಅಗಲಿಕೆಯಿಂದ ಬಡವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಮೂ ಅವರು ಬದುಕಿನಲ್ಲಿ ಹಲವಾರು ಬರಹಗಾರರು ಮತ್ತು ಪತ್ರಕರ್ತರನ್ನು ಸಲಹಿ ಬೆಳೆಸಿದ್ದರು. ಅವರು ನನಗೂ ಆತ್ಮೀಯ ಸ್ನೇಹಿತರಾಗಿದ್ದರು. ರಾಮು ಅವರ ಸಾವಿನಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಗೆಳೆಯರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮೈಸೂರು ನಗರದ ಸರಸ್ವತಿಪುರಂನ 9ನೇ ಕ್ರಾಸ್‌ನಲ್ಲಿ ಅವರು ಮಂಗಳವಾರ ಬೆಳಗಿನ ಜಾಮ ಹೃದಯಾಘಾತಕ್ಕೊಳಗಾಗಿ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತ ಟಿಎಸ್ ರಾಮಸ್ವಾಮಿ ಅವರಿಗೆ ಸೋದರಿ ರಾಜಲಕ್ಷ್ಮಿ, ಸೋದರ ಟಿ.ಎಸ್.ವೇಣುಗೋಪಾಲ್ ಸೇರಿದಂತೆ ಕುಟುಂಬಸ್ಥರಾದ ಶೈಲಜಾ, ಡಾ.ಎಸ್.ತುಕಾರಾಮ್, ರಾಘವೇಂದ್ರ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.