ಇಂದಿನಿಂದ ಕಾಚಿಗುಡದಿಂದ ವಂದೇ ಭಾರತ್ ರೈಲು ಪ್ರಾಯೋಗಿಕವಾಗಿ ಸಂಚಾರ
ಬೆಂಗಳೂರು: ಕರ್ನಾಟಕಕ್ಕೆ ಮತ್ತೊಂದು ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‍ಪ್ರೆಸ್ ಸಿಕ್ಕಿದೆ. ರಾಜ್ಯದಲ್ಲಿ ಈಗಾಗಲೇ ಎರಡು ವಂದೇ ಭಾರತ್ ರೈಲುಗಳು ಓಡುತ್ತಿವೆ. ಸೆಪ್ಟೆಂಬರ್ 24ರಿಂದ ರಾಜ್ಯದ 3ನೇ ರೈಲು ಬೆಂಗಳೂರಿನಿಂದ ಸಂಚಾರ ಆರಂಭಿಸಲಿದೆ. ಸೆಪ್ಟೆಂಬರ್ 24ರ ಭಾನುವಾರ ಐಟಿ ಕ್ಷೇತ್ರದ ಹಬ್ ಆಗಿರುವ ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ನಡುವೆ ವಂದೇ ಭಾರತ್ ರೈಲು ಸೇವೆಗೆ ಚಾಲನೆ ಸಿಗಲಿದೆ. ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಾಗುತ್ತದೆ.
ಕರ್ನಾಟಕದಲ್ಲಿ 2022ರ ನವೆಂಬರ್‍ನಲ್ಲಿ ಮೈಸೂರು-ಚೆನ್ನೈ ವಯಾ ಬೆಂಗಳೂರು ನಡುವೆ ಮೊದಲ ವಂದೇ ಭಾರತ್ ರೈಲು ಆರಂಭವಾಯಿತು. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ 2ನೇ ವಂದೇ ಭಾರತ್ ರೈಲು 2023ರಲ್ಲಿ ಆರಂಭವಾಯಿತು. ಈಗ ಯಶವಂತಪುರ-ಕಾಚಿಗುಡ ರೈಲು ರಾಜ್ಯದ 3ನೇ ವಂದೇ ಭಾರತ್ ರೈಲು ಆಗಲಿದೆ.
ದಕ್ಷಿಣ ಮಧ್ಯ ರೈಲ್ವೆ ಬೆಂಗಳೂರಿನ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ವಂದೇ ಭಾರತ್ ರೈಲು ಓಡಿಸಲಿದೆ. ಈ ರೈಲು ಸುಮಾರು 7 ಗಂಟೆ ಅವಧಿಯಲ್ಲಿ ಬೆಂಗಳೂರು ಮತ್ತು ಹೈದರಬಾದ್ ನಡುವಿನ 610 ಕಿ.ಮೀ. ಮಾರ್ಗವನ್ನು ಕ್ರಮಿಸಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕಕ್ಕೆ ಹೆಚ್ಚು ಉಪಯೋಗವಿಲ್ಲ
ಈ ವಂದೇ ಭಾರತ್ ರೈಲು ಗುಂತಕಲ್ಲು, ರಾಯಚೂರು ಮೂಲಕ ಸಂಚಾರ ನಡೆಸಿದ್ದರೆ ಕರ್ನಾಟಕದ ರಾಯಚೂರು ಜಿಲ್ಲಾ , ಮಂತ್ರಾಲಯಕ್ಕೆ ತೆರಳುವವರಿಗೆ, ಸೇಡಂ ಬಳಿಯ ಸಿಮೆಂಟ್ ಕೈಗಾರಿಕೆ ಭಾಗದವರಿಗೆ, ಯಾದಗಿರಿ ಜಿಲ್ಲೆಗೆ ಉಪಯೋಗವಾಗುತ್ತಿತ್ತು ಎಂಬ ಬೇಡಿಕೆ ಇದೆ.
ಯಶವಂತಪುರದಿಂದ ಹೊರಡುವ ರೈಲು ಧರ್ಮಾವರಂ, ದೋನ್, ಕರ್ನೂಲ್ ನಗರ, ಗಡ್ಜಾಲ ಜಂಕ್ಷನ್, ಮೆಹಬೂಬ್ ನಗರ, ಶಾದ್ ನಗರ ಮೂಲಕ ಕಾಚಿಗುಡ ತಲುಪಲಿದೆ. ಆದರೆ ಈ ರೈಲು ಕರ್ನಾಟಕದಲ್ಲಿ ಸುಮಾರು 80-85 ಕಿ. ಮೀ. ಮಾತ್ರ ಸಂಚಾರ ನಡೆಸಲಿದೆ. ಆದ್ದರಿಂದ ಈ ರೈಲಿನಿಂದ ರಾಜ್ಯಕ್ಕೆ ಉಪಯೋಗ ಕಡಿಮೆ ಎಂಬ ಮಾತು ಕೇಳಿ ಬರುತ್ತಿದೆ.
ಸಮಯ: ಪ್ರತಿದಿನ ಬೆಳಿಗ್ಗೆ 5.30ಕ್ಕೆ ಕಾಚಿಗುಡದಿಂದ ಹೊರಡಲಿದೆ. 6.59ಕ್ಕೆ ಮೆಹಬೂಬ್‌ನಗರ, 8.39ಕ್ಕೆ ಕರ್ನೂಲ್ ಸಿಟಿ, 10.54ಕ್ಕೆ ಅನಂತಪುರ, 11.25ಕ್ಕೆ ಧರ್ಮಾವರಂ ರೈಲು ನಿಲ್ದಾಣಗಳಿಗೆ ತಲುಪಿ ಮಧ್ಯಾಹ್ನ 2ಕ್ಕೆ ಯಶವಂತಪುರಕ್ಕೆ ತಲುಪಲಿದೆ. ಯಶವಂತಪುರದಿಂದ ಮಧ್ಯಾಹ್ನ 2.45ಕ್ಕೆ ಹೊರಡಲಿದೆ. ಅನಂತಪುರಕ್ಕೆ ಸಂಜೆ 5.40ಕ್ಕೆ, ಕರ್ನೂಲ್ ಸಿಟಿಗೆ ರಾತ್ರಿ 7.50ಕ್ಕೆ, ಮೆಹಬೂಬ್‌ನಗರಕ್ಕೆ ರಾತ್ರಿ 9.39ಕ್ಕೆ ಬಂದು, ರಾತ್ರಿ 11.15ಕ್ಕೆ ಕಾಚಿಗುಡಕ್ಕೆ ತಲುಪಲಿದೆ.
ಯಶವಂತಪುರ ದಾಟಿದ ಬಳಿಕ ಬರುವ ಹಿಂದೂಪುರ ರೈಲು ನಿಲ್ದಾಣ ಆಂಧ್ರ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಈ ರೈಲು ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುವ ಐಟಿ ಉದ್ಯೋಗಿಗಳಿಗೆ ಮಾತ್ರ ಹೆಚ್ಚು ನೆರವಾಗಲಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.