
ಮೈಸೂರು: ವಿಶ್ವ ರಕ್ತ ದಾನಿಗಳ ದಿನಾಚರಣೆ ಅಂಗವಾಗಿ ಸರಸ್ವತಿಪುರಂನ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಬಜಾಜ್ ಫೈನಾನ್ಸ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಜಾಜ್ ಫೈನಾನ್ಸ್ ನೌಕರರಿಂದ ರಕ್ತದಾನ ಶಿಬಿರ ನಡೆಯಿತು.
ಜೀವದಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಅನೇಕ ಜೀವಗಳನ್ನು ಉಳಿಸಬಹುದಾದ ರಕ್ತದಾನ ಶ್ರೇಷ್ಠ ದಾನವಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ರಕ್ತದಾನ ಒಂದು ಉತ್ತಮ ಕಾರ್ಯ. ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು. ರಕ್ತದ ಕೊರತೆಯಿಂದ ಇಂದು ಸಾಕಷ್ಟು ಪ್ರಾಣ ಹಾನಿ ಆಗುತ್ತಿದೆ. ಇದಕ್ಕೆ ರಕ್ತದಾನ ಪರಿಹಾರವಾಗಿದೆ. ಜಿಲ್ಲೆಯ ರಕ್ತ ಭಂಡಾರದ ಕೊರತೆಯನ್ನು ಇಂತಹ ಶಿಬಿರ ಆಯೋಜನೆ ಮಾಡುವ ಮೂಲಕ ನಿವಾರಿಸಬಹುದು ಎಂದು ಅಭಿಪ್ರಾಯಪಟ್ಟರು.
ರಕ್ತದಾನದಿಂದ ಆರೋಗ್ಯಕರ ಸಮಾಜಕ್ಕೆ ಪ್ರತಿಯೊಬ್ಬರು ಕೊಡುಗೆ ನೀಡಬಹುದು. ರಕ್ತದಾನದ ಮಹತ್ವ, ಪ್ರಯೋಜನ ಹಾಗೂ ಯಾವ ವಯಸ್ಸಿನಿಂದ, ವರ್ಷದಲ್ಲಿ ಎಷ್ಟು ಬಾರಿ ರಕ್ತದಾನ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
೫೦ ಸಿಬ್ಬಂದಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ನೌಕರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಜಾಜ್ ಫೈನಾನ್ಸ್ ಲಿಮಿಟೆಡ್ ನಿರ್ವಾಹಕ ಭೈರವ, ವ್ಯವಸ್ಥಾಪಕ ಮಂಜುನಾಥ್.ಬಿ.ಎಸ್, ರಶ್ಮಿ, ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.