ಮೈಸೂರು: ರಕ್ತದಾನ ಅತ್ಯಂತ ಶ್ರೇಷ್ಠವಾದುದು. ಇನ್ನೊಬ್ಬರ ಜೀವ ಉಳಿಸಲು ಸಹಾಯವಾಗುವ ಈ ಕಾರ್ಯದಲ್ಲಿ ಯುವ ಸಮುದಾಯ ಹೆಚ್ಚಿನ ಆಸಕ್ತಿ ವಹಿಸಿ ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.
ಮಾನಂದವಾಡಿ ರಸ್ತೆಯಲ್ಲಿರುವ ಎನ್‌ಐಇ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಮತ್ತು ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಹಾಗೂ ಎನ್‌ಐಇ ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಆರೋಗ್ಯದ ಕಾಳಜಿಯೂ ಅಷ್ಟೇ ಅವಶ್ಯಕ. ಎಷ್ಟೇ ತಂತ್ರಜ್ಞಾನ ಮುಂದುವರೆದರೂ ಸಹ ರಕ್ತಕ್ಕೆ ಪರ್ಯಾಯ ರಕ್ತದಾನವೇ ಹೊರೆತು ಮತ್ತೊಂದಿಲ್ಲ. ಕೋವಿಡ್ ಸಂದರ್ಭದಲ್ಲಿ ರಕ್ತದಾನಿಗಳ ಸೇವೆ ಮತ್ತು ರಕ್ತನಿಧಿ ಕೇಂದ್ರಗಳ ಜವಬ್ದಾರಿಯುತ ಕೆಲಸ ಶ್ಲಾಘನೀಯವಾದುದು. ಮುಂದಿನ ದಿನದಲ್ಲಿ ರಾಜ್ಯ ಸರ್ಕಾರ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ರಕ್ತದಾನಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಕ್ತದಾನಿಗಳಿಗೆ ಸರ್ಕಾರಿ ಸವಲತ್ತಿನಲ್ಲಿ ಪ್ರಮುಖ ಆದ್ಯತೆ ನೀಡಿ ಸಬ್ಸಿಡಿ ಯೋಜನೆ ಕಲ್ಪಿಸುವ ಯೋಜನೆ ಜಾರಿಗೆ ತರಲು ಮುಂದಾಗಬೇಕು ಎಂದರು.
ಕೆ.ಆರ್.ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಬಗ್ಗೆ ಜಾಗೃತಿ ಮೂಡಿಸಿದರು.
ಇದೇ ವೇಳೆ ೩೦ಕ್ಕೂ ಹೆಚ್ಚು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಕೇಶವ ಗೌಡ.ಎಂ.ಪಿ, ನಂಜುಂಡಸ್ವಾಮಿ, ಮೇಧ, ಅನನ್ಯ ಪ್ರಭು, ಗಿರಿಜಾ ಪಾಟೀಲ್, ಹರೀಶ್.ಪಿ, ಮಸರ ರಾಮ್ ಮಾಲಿ, ಗೋಪಾಲ್, ರಾಮಚಂದ್ರ.ಎಸ್, ಶಿವಕುಮಾರ್ ಹಾಂಜಿ, ಸುಹಾಸ್ ಅವರಿಗೆ ಜೀವ ರಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತಿ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನದ ಶಿಬಿರ ಆಯೋಜಕರಾದ ಜೆಕೆ ಟೈರ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ಸೀನಿಯರ್ ಜನರಲ್ ಮ್ಯಾನೇಜರ್ ಜಗದೀಶ್.ಆರ್, ಅಸಿಸ್ಟೆಂಟ್ ಮ್ಯಾನೇಜರ್ ನಾಗರಾಜ್, ಎಲ್ ಅಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಸೀನಿಯರ್ ಮ್ಯಾನೇಜರ್ ಲತಾ ಓಂ ಪ್ರಕಾಶ್, ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕ ಆನಂದ್ ಮಂಡೋತ್ ಹಾಗೂ ದೇವೇಂದ್ರ ಪರಿಹಾರೀಯ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಮಹಮ್ಮದ್ ಸಿರಾಜ್ ಅಹಮದ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹಾಗೂ ಮುತ್ತಣ್ಣ, ಎನ್‌ಐಇ ಕಾಲೇಜ್ ಉಪ ಪ್ರಾಂಶುಪಾಲ ಡಾ.ಎಂ.ಎಸ್.ಗಣೇಶ್ ಪ್ರಸಾದ್, ರಶ್ಮಿ, ಮಮತಾ, ಸುರೇಶ್, ಅಜಯ್ ಶಾಸ್ತ್ರಿ ಹಾಗೂ ಇನ್ನಿತರರು ಹಾಜರಿದ್ದರು.
ರಕ್ತ, ನೇತ್ರ, ದೇಹದಾನ ಪವಿತ್ರವಾದುದು. ರಕ್ತದಾನ ಇನ್ನೊಂದು ಜೀವ ಉಳಿಸಬಲ್ಲ ಸಂಜೀವಿನಿಯಾಗಿದ್ದು, ದಾನಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ಆಧುನಿಕ ದಿನಗಳಲ್ಲಿ ರಕ್ತದಾನದ ಅವಶ್ಯಕತೆ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅನಿವಾರ್ಯ. ನೀವು ಮಾಡುತ್ತಿರುವುದು ಶ್ರೇಷ್ಠ ಕೆಲಸ, ದಯವಿಟ್ಟು ಮುಂದುವರಿಸಬೇಕು. ಈ ಮೂಲಕ ನೀವು ಅನೇಕ ಜೀವಗಳನ್ನು ಉಳಿಸಬಹುದು. ರಕ್ತದಾನಿಗಳ ಕಾರ್ಯ ಶ್ಲಾಘನೀಯವಾದುದು.
-ಶಿವಕುಮಾರ್, ಮೇಯರ್