ಮಡಿಕೇರಿ: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸ್ನಾತಕೋತ್ತರ ಕೇಂದ್ರ, ಕೊಡಗು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಮಡಿಕೇರಿ, ಸೋಮವಾರಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಶಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಕುಶಾಲನಗರ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ವಾಣಿಜ್ಯೋದ್ಯಮಿಗಳ ನಿಗಮ ಇವರ ಸಂಯುಕ್ತ ಆಶ್ರಯದಲ್ಲಿ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಇಲ್ಲಿ ಬುಧವಾರ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯಿತು.
ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಸೀನಪ್ಪ ಉದ್ಘಾಟಿಸಿ ಮಾತನಾಡಿ ರಕ್ತದಾನ ಶ್ರೇಷ್ಠದಾನವಾಗಿದ್ದು, ಯುವಜನತೆ ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಮಾದರಿಯಾಗುವಂತೆ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಕಾರ್ಲ್ ಲ್ಯಾಂಡ್‌ಸ್ಟೀನರ್ ಅವರು ರಕ್ತದ ಗುಂಪನ್ನು ಕಂಡುಹಿಡಿದ ವಿಜ್ಞಾನಿ. ಇವರ ಹುಟ್ಟುಹಬ್ಬದ ದಿನವನ್ನು ವಿಶ್ವ ರಕ್ತದಾನಿಗಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದರು.
ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅವರು ರಕ್ತ ವಿಧಳನಾ ಘಟಕ, ರಕ್ತನಿಧಿ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಅವರು ಮಾತನಾಡಿ ಎಲ್ಲರೂ ಮುಂದಾಗಿ ರಕ್ತದಾನ ಮಾಡಿ. ರಕ್ತ ಅಗತ್ಯವಿರುವವರ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ಅವರು ರಕ್ತದ ವೆಬೆಸೈಟ್ e-ಡಿಚಿಞಣಞosh ದಲ್ಲಿ ದಾನಿಗಳು ಹಾಗೂ ರಕ್ತದಾನ ಶಿಬಿರಗಳನ್ನು ನೋಂದಣಿ ಮಾಡಬಹುದು ಎಂದು ತಿಳಿಸಿದರು. ತೊರೆನೂರು ಗ್ರಾ.ಪಂ.ಅಧ್ಯಕ್ಷರಾದ ರೂಪ ಮಹೇಶ್ ಅವರು ಮಾತನಾಡಿ ರಕ್ತದಾನ ದಿನಾಚರಣೆ ಒಂದು ಉತ್ತಮ ಕಾರ್ಯಕ್ರಮವಾಗಿದೆ. ಮುಂದಿನ ಹಂತದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸುವ ಬಗ್ಗೆ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ರಕ್ತದಾನಿಗಳಾದ ಶರತ್ ಕಾಂತೆ(೬೧ ಬಾರಿ), ಮಾರುತಿ ಪ್ರಸಾದ್(೨೧ ಬಾರಿ), ಮಣಿಕಂಠ(೧೩ ಬಾರಿ) ಮತ್ತು ಪ್ರತಿಷ್ಠಾ(೫ ಬಾರಿ) ಇವರನ್ನು ಸನ್ಮಾನಿಸಲಾಯಿತು. ರಕ್ತದಾನಿಗಳಾದ ಶರತ್‌ಕಾಂತ್, ಮಾರುತಿ ಪ್ರಸಾದ್, ಮಣಿಕಂಠ ಹಾಗೂ ಪ್ರತಿಷ್ಠ ಅವರು ರಕ್ತದಾನ ಮಾನವೀಯ ಸೇವೆ, ಸಮಾಜಸೇವೆ ಎಂದು ಅನುಭವ ಹಂಚಿಕೊಂಡರು. ಪ್ರಥಮ ಬಾರಿ ರಕ್ತದಾನ ಮಾಡಿದ ಜ್ಞಾನ ಕಾವೇರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಕುಶಾಲನಗರ ರೋಟರಿ ಸಂಸ್ಥೆಯ ಉಲ್ಲಾಸ್ ಕೃಷ್ಣ, ಸ್ವಾಮಿ ವಿವೇಕಾನಂದ ಮೂವ್ ಮೆಂಟ್‌ನ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಂ.ಡಿ.ರಂಗಸ್ವಾಮಿ, ಕುಶಾಲನಗರ ವಾಣಿಜ್ಯೋಧ್ಯಮಿಗಳ ನಿಗಮದ ಅಧ್ಯಕ್ಷರಾದ ಅಮೃತ ರಾಜ್, ಸೋಮವಾಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ವೈದ್ಯಾಧಿಕಾರಿ ಡಾ.ಅಶೋಕ್, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಿಬ್ಬಂದಿಗಳು, ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್.ಆನಂದ್ ಅವರು ಸ್ವಾಗತಿಸಿದರು. ಕೊಡಗು ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕರಾದ ಜಮೀರ್ ಅಹಮದ್ ನಿರೂಪಿಸಿದರು. ಸಹಾಯಕ ಗ್ರಂಥಪಾಲಕರಾದ ಕೆ.ಜೆ.ಹರೀಶ್ ವಂದಿಸಿದರು. ಬುಧವಾರ ನಡೆದ ರಕ್ತದಾನ ಶಿಬಿರದಲ್ಲಿ ೫೪ ಮಂದಿ ರಕ್ತದಾನ ಮಾಡಿದರು.