ಗುಂಡ್ಲುಪೇಟೆ: ಪಟ್ಟಣದ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಪುರಾತನ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈಶ್ವರ ಮತ್ತು ಪಾರ್ವತಮ್ಮನವರಿಗೆ ಪ್ರಾತಃ ಕಾಲದಲ್ಲಿ ಅಭ್ಯಂಜನ ಸ್ನಾನ, ರುದ್ರಾಭಿಷೇಕ, ಗಂಧಾಲಂಕಾರ ಸೇರಿದಂತೆ ವಿವಿಧ ಬಗೆಯ ವಿಶೇಷ ಹೂವಿನ ಅಲಂಕಾರ ಮಾಡಿ ದೇವಸ್ಥಾನದ ಅರ್ಚಕರಾದ ಶಂಕರ ನಾರಾಯಣ ಜೋಯಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ನೂರಾರು ಮಂದಿ ಭಕ್ತಾದಿಗಳು ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ಇನ್ನೂ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆಷಾಢಮಾಸದ ವಿಶೇಷ ಪೂಜೆ ಪ್ರತಿ ಶುಕ್ರವಾರ ಜರುಗಲಿದ್ದು, ಪಾರ್ವತಮ್ಮನವರಿಗೆ ಬಳೆ, ತರಕಾರಿ, ಉಯ್ಯಾಲೆ ಅಲಂಕಾರ ಸೇರಿದಂತೆ ವಿವಿಧ ಬಗೆಯ ಪೂಜೆ ನೆರವೇರಿಸಲಾಗುವುದು ಎಂದು ಅರ್ಚಕರು ತಿಳಿಸಿದರು.
ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತ ಸಾಗರ: ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ವಾರಾಂತ್ಯದ ರಜೆ ಹಾಗೂ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಮಂದಿ ಭಕ್ತಾದಿಗಳು, ಪ್ರವಾಸಿಗರು ತೆರಳಿದ್ದರು. ಇದರಿಂದ ಬೆಟ್ಟದಲ್ಲಿ ಭಕ್ತ ಸಾಗರವೇ ಕಂಡುಬಂತು.
ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ಬೆಟ್ಟಕ್ಕೆ 10ಕ್ಕೂ ಹೆಚ್ಚು ವಿಶೇಷ ಬಸ್‍ಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 11ರಿಂದ 12 ಗಂಟೆ ಸಮಯ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ಬಸ್ ಹತ್ತಲು ನೂಕುನುಗ್ಗಲು ಉಂಟಾಯಿತು. ಇನ್ನೂ ಬೆಟ್ಟದಲ್ಲಿ ಗೋಪಾಲಸ್ವಾಮಿಗೆ ಪೂಜೆ ಸಲ್ಲಿಸಲು ಭಕ್ತಾದಿಗಳು ದೇವಸ್ಥಾನದ ಒಂದು ಸುತ್ತು ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ಪೂಜೆ ಸಲ್ಲಿಸಿದರು. ನಂತರ ಅರ್ಚಕರಾದ ಗೋಪಾಲಕೃಷ್ಣ ಭಟ್ಟರು ದೇವರಿಗೆ ವಿಶೇಷ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ಮಧ್ಯಾಹ್ನದ ವೇಳೆ ದೇವಸ್ಥಾನದ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಸಹ ನಡೆಸಲಾಯಿತು.
ಪ್ರವಾಸಿಗರು ಸೆಲ್ಫಿಯಲ್ಲಿ ತಲ್ಲೀನ: ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸಮುದ್ರ ಮಟ್ಟದಿಂದ 1440 ಮೀ ಎತ್ತರವಿರುವ ಕಾರಣ ದೇವಸ್ಥಾನದ ಸುತ್ತಲು ಹಿಮವದ್ ರಾಶಿಯನ್ನು ಹೊದ್ದು ಮಲಗಿತ್ತು. ಇದರಿಂದ ಚಳಿಯ ವಾತಾವರಣವೂ Pಕೂಡ ಹೆಚ್ಚಿತ್ತು. ಜೊತೆಗೆ ಪರಿಸರ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಹಿನ್ನಲೆ ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮನಸೋತು ಸೆಲ್ಫಿ ತೆಗೆಯುವುದರಲ್ಲಿ ತಲ್ಲೀನರಾಗಿದ್ದರು.
ಮಹದೇಶ್ವರ ಬೆಟ್ಟಕ್ಕೆ 20 ಬಸ್: ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಗುಂಡ್ಲುಪೇಟೆಯಿಂದ ಮಲೇ ಮಹದೇಶ್ವರ ಬೆಟ್ಟಕ್ಕೆ 20ಕ್ಕೂ ಅಧಿಕ ಬಸ್‍ಗಳನ್ನು ಗುಂಡ್ಲುಪೇಟೆ ಡಿಪೋದಿಂದ ಬಿಡಲಾಗಿತ್ತು.
ಮಹದೇಶ್ವರ ಬೆಟ್ಟಕ್ಕೆ ತೆರಳಲು ಭಾನುವಾರ ಬೆಳಗ್ಗೆ 6 ಗಂಟೆಯಿಂದಲೇ ಭಕ್ತಾದಿಗಳು ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ಜಮಾಯಿಸಿದ್ದರು. ಆರಂಭದಲ್ಲಿ ಬೆರಳೆಣಿಕೆ ಬಸ್‍ಗಳನ್ನು ಬಿಟ್ಟಿದ ಕಾರಣ ಸಂಚಾರ ನಿಯಂತ್ರಕ ಹಾಗೂ ಜನರು ನಡುವೆ ಕೆಲಕಾಲ ವಾಗ್ವಾದ ನಡೆಯಿತು. ನಂತರ ಡಿಪೋ ವ್ಯವಸ್ಥಾಪಕಿ ಪುಷ್ಪ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಕಲ್ಪಿಸಿದರು.