ಮೈಸೂರು: ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ), ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಐ ಫೋನ್ ಬಿಡಿಭಾಗಗಳ ತಯಾರಕಾ ಕಾರ್ಖಾನೆಯಾದ ಫ್ಯಾಕ್ಸ್‌ಕಾನ್ ಸಂಸ್ಥೆಗೆ ೩೦೦ ಎಕರೆ ಭೂಮಿ ಮಂಜೂರು ಮಾಡಿದೆ. ಅಲ್ಲದೆ ಒಂದು ಕಂಪನಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿ ತಂದು ೧೨ ಗಂಟೆಗಳ ಕೆಲಸದ ಅವಧಿ ವಿಸ್ತರಿಸಿದೆ. ಇದು ಕಾರ್ಮಿಕರು ಹಾಗೂ ಮಹಿಳೆಯರನ್ನು ಮತ್ತಷ್ಟು ಶೋಷಣೆ ಮಾಡುವ ತಿದ್ದುಪಡಿಯಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ೪೪ ಕಾರ್ಮಿಕ ಕಾನೂನುಗಳನ್ನು ಕೇವಲ ೪ ಸಂಹಿತೆಗಳಾಗಿ ಬದಲಾಯಿಸಿದೆ ಎಂದು ಕಿಡಿ ಕಾರಿದರು.
ರೈತ ವಿರೋಧಿ ಭೂ ಸ್ವಾಧೀನ ಕಾನೂನುಗಳನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದರೂ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಹಿಂಪಡೆಯಲಿಲ್ಲ. ಹೀಗಾಗಿ ರೈತರ ವಿರೋಧಿಯಾದ ಈ ಕಾನೂನುಗಳನ್ನು ಹಿಂಪಡೆಯಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿ ಮಾಡದಿರುವ ಭರವಸೆ ನೀಡಿದ್ದು, ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಹಿಂಪಡೆದಿಲ್ಲ. ಜತೆಗೆ ಬಿಸಿಯೂಟ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿಲ್ಲ. ಹೀಗಾಗಿ ಕೂಡಲೇ ಕಾರ್ಮಿಕರು, ರೈತರು, ಮಹಿಳೆಯರ ಹಿತ ಗಮನದಲ್ಲಿಟ್ಟುಕೊಂಡು ಈ ಕರಾಳ ತಿದ್ದುಪಡಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎನ್.ಕೆ.ದೇವದಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ, ಸಿಪಿಐ ಕಾರ್ಯದರ್ಶಿ ಹೆಚ್.ಬಿ.ರಾಮಕೃಷ್ಣ, ಕೆ.ಜಿ.ಸೋಮರಾಜೇ ಅರಸ್, ರಾಮು, ಎಸ್.ಬಸವರಾಜು, ಇಕ್ಬಾಲ್ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು.