Friday, April 4, 2025
Google search engine

Homeರಾಜ್ಯವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ


ಮೈಸೂರು: ವಿದ್ಯುತ್ ದರ ಏರಿಕೆ ಖಂಡಿಸಿ ನಗರ ಮತ್ತು ಗ್ರಾಮಾಂತರ ಬಿಜೆಪಿ ಕಾರ್ಯಕರ್ತರು ನ್ಯಾಯಾಲಯದ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು.
ಸೋಮವಾರ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್‌ಗೆ ಧಿಕ್ಕಾರ ಕೂಗಿದರು. ೨೦೦ ಯೂನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ ೮೦ ಯೂನಿಟ್ ಕೊಟ್ಟಿದ್ದಾರೆ. ಈ ಮೋಸ ನಿಲ್ಲಿಸುವಂತೆ ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಮುಂದುವರಿಸಬೇಕು. ಹಾಲಿನ ಪ್ರೋತ್ಸಾಹ ಧನ ಕಡಿತಕ್ಕೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಿದ್ಯುತ್ ದರ ಹೆಚ್ಚಿಸದಿರುವಂತೆ ಭಿತ್ತಿಪತ್ರ ಪ್ರದರ್ಶಿಸಿ ಗಮನಸೆಳೆದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಬಜರಂಗದಳ ನಿಷೇಧಿಸುವುದಾಗಿ ಘೋಷಿಸಿದರು. ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳು ವಿಶೇಷವಾಗಿ ಪೂಜೆ ಮಾಡುವ ಗೋ ರಕ್ಷಣೆ ಕಾಯಿದೆ ಹಿಂಪಡೆಯುವ ಮಾತುಗಳನ್ನಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಗ್ಯಾರಂಟಿಯಲ್ಲಿ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ವಾಗ್ದಾನ ನೀಡಿದ್ದರು. ಚುನಾವಣಾ ಭಾಷಣದಲ್ಲಿ ಸಿದ್ದರಾಮಯ್ಯ ಅವರು ನಂಗೂ ನಿಂಗೂ ಫ್ರಿ ಎನ್ನುತ್ತಿದ್ದರು. ಈಗ ನಿಯಮ ತರುತ್ತಿದ್ದಾರೆ. ಇದು ಹೇಳುವುದೊಂದು ಮಾಡುವುದೊಂದು ಎಂಬಂತಾಗಿದೆ ಎಂದು ಟೀಕಿಸಿದರು.
ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಜನಾದೇಶ ಕೊಟ್ಟ ಮತದಾರರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ವ್ಯಾಪಾರಸ್ಥರು ಗ್ರಾಹಕರಿಗೆ ಟೋಪಿ ಹಾಕುವಂತೆ ಜನರಿಗೆ ಟೋಪಿ ಹಾಕಿದೆ. ದೇಶದ ಇತರ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಗ್ಯಾರಂಟಿ ಭರವಸೆಯನ್ನು ಈಡೇರಿಸಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಾಜಿ ಶಾಸಕ ಎಲ್.ನಾಗೇಂದ್ರ, ಮುಖಂಡ ಕವೀಶ್ ಗೌಡ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಜಯಪ್ರಕಾಶ್ (ಜೆಪಿ), ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ನರಸಿಂಹರಾಜ ಕ್ಷೇತ್ರದ ಯುವ ಮುಖಂಡ ಗಿರಿಧರ್, ಕೇಬಲ್ ಮಹೇಶ್, ಮೈಕಾ ಪ್ರೇಮ್ ಕುಮಾರ್, ಲೀಲಾ ನಾಯ್ಡು, ಜೋಗಿ ಮಂಜು, ಮಹೇಶ್, ಮಾಧ್ಯಮ ವಕ್ತಾರ ಮಹೇಶ್, ಚಾಮುಂಡೇಶ್ವರಿ ಮಂಡಲದ ರಘು ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular