ಮೈಸೂರು: ಬಿಜೆಪಿ ಸರ್ಕಾರ ಆಗಸ್ಟ್ ೨೦೧೯ರಿಂದ ಏಪ್ರಿಲ್ ೨೦೨೩ರ ತನಕ ೫ ರೂ. ೬೨ ಪೈಸೆ ವಿದ್ಯುತ್ ದರವನ್ನು ಹೆಚ್ಚಿಸಿದೆ. ಈಗ ೭೦ ಪೈಸೆ ಹೆಚ್ಚಳವೂ ಬಿಜೆಪಿ ಸರ್ಕಾರದ ಕೊಡುಗೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿರುಗೇಟು ನೀಡಿದರು.
ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ದರ ಹೆಚ್ಚಳದ ಕುರಿತು ಬಿಜೆಪಿ ಮುಖಂಡರು ಮೈ ಮೇಲೆ ಚೇಳು ಬಿಟ್ಟುಕೊಂಡವರಂತೆ ಆಡುತ್ತಿದ್ದಾರೆ. ವಿದ್ಯುತ್ ಕಚೇರಿ ಮುತ್ತಿಗೆ, ಪ್ರತಿಭಟನೆ ಮಾಡುತ್ತಿದ್ದಾರೆ. ೫.೬೨ ರೂ. ಹೆಚ್ಚಳ ಮಾಡಿದಾಗ ಯಾಕೇ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
೨೦೧೮ರ ಕಾಂಗ್ರೆಸ್ ಸರ್ಕಾರ ಪ್ರತಿ ಯೂನಿಟ್‌ಗೆ ೪ ರೂ. ಕೊಟ್ಟು ಖರೀದೆ ಮಾಡಿದರೆ, ೨೦೧೯ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ೨.೫ ರೂ. ಹೆಚ್ಚಿಸಿ, ಪ್ರತಿ ಯೂನಿಟ್‌ಗೆ ೬.೫ ರೂ.ಗೆ ಏರಿಕೆ ಮಾಡಿತು. ಏಕಾಏಕಿ ವಿದ್ಯುತ್ ದರ ಹೆಚ್ಚಿಸಿ ಅಂದಾಜು ೬೫೩೬ ಕೋಟಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜನ ವಿರೋಧಿ: ಶ್ರೀಮಂತರ ಲಕ್ಷಾಂತರ ಕೋಟಿ ಹಣವನ್ನು ಮನ್ನಾ ಮಾಡಿದಾಗ ದೇಶ ಲೂಟಿಯಾಗಲಿಲ್ಲ. ಬಡವರಿಗೆ ಸೌಲಭ್ಯ ನೀಡಿದರೆ ದೇಶ ದಿವಾಳಿಯಾಗುತ್ತದೆ ಎಂದು ಅರಚುತ್ತಿರುವ ಬಿಜೆಪಿ ನಾಯಕರು ಜನ ಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕುಟುಕಿದರು.
ಮಹಿಳೆಯರಿಗೆ ಉಚಿತ ಪ್ರಯಾಣ ಸಹಿಸಲಾಗುತ್ತಿಲ್ಲ. ೭ ಕೆಜಿ ಅಕ್ಕಿಯಿಂದ ೪ ಕೆಜಿಗೆ ಇಳಿಸಿದ ಬಸವರಾಜ ಬೊಮಾಯಿ ಅವರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪಡಿತರ ವಿತರಣೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಕೇಳಿ ಅನುಷ್ಠಾನ ಮಾಡುವ ಅಗತ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.
ಇತರೆ ರಾಜ್ಯಗಳಿಂದ ಅಕ್ಕಿ ಖರೀದಿ: ೭ ಲಕ್ಷ ಟನ್ ಅಕ್ಕಿ ದಾಸ್ತಾನಿದ್ದರೂ ಕರ್ನಾಟಕಕ್ಕೆ ಅಗತ್ಯವಿರುವ ೨.೪೫ ಲಕ್ಷ ಟನ್ ಅಕ್ಕಿ ಕೊಡುತ್ತಿಲ್ಲ. ಈ ಸಂಬಂಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ತೆಲಂಗಾಣ, ರಾಜಸ್ತಾನ, ಪಂಜಾಬ್‌ನಲ್ಲಿ ಅಕ್ಕಿ ಖರೀದಿಗೆ ಪ್ರಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು.
ಸುರ್ಜೇವಾಲಾ ಟೆರರಿಸ್ಟ್ಟಾ?: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಟೆರರಿಸ್ಟಾ? ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಿಗಳೊಂದಿಗೆ ಮಾತಾಡಿದರೆ ತಪ್ಪೇನು?
ಪ್ರತಾಪ ಸಿಂಹಗೆ ತಿರುಗೇಟು: ೨೦೧೪, ೨೦೧೯ರ ಚುನಾವಣೆಗಳಲ್ಲಿ ಸಂಸದ ಪ್ರತಾಪ ಸಿಂಹ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೀರಿ ಎಂಬುದನ್ನು ಬಹಿರಂಗಪಡಿಸುವಂತೆ ಲಕ್ಷ್ಮಣ್ ಸವಾಲು ಹಾಕಿದರು. ೮ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಯಾಕೇ ಹೋಗಲಿಲ್ಲ ಎಂದು ಪ್ರಶ್ನಿಸಿದರು.
೨೦೨೪ರ ಚುನಾವಣೆಯಲ್ಲಿ ಪಕ್ಷ ನಿಮಗೆ ಟಿಕೆಟ್ ಕೊಟ್ಟರೂ ಸೋಲುತ್ತೀರಿ. ನಿಮ್ಮದೇ ಪಕ್ಷದವರು ಸೋಲಿಸಲು ಸಿದ್ಧರಾಗಿದ್ದಾರೆ. ಕುಶಾಲನಗರದ ಗೇಟ್‌ನಲ್ಲಿ ಅಪ್ಪಚ್ಚುರಂಜನ್, ಕೆ.ಜಿ.ಬೋಪಯ್ಯ ಪ್ರತಾಪಸಿಂಹ ಬರುವುದನ್ನೇ ಕಾಯುತ್ತಿದ್ದಾರೆ. ಎಲ್.ನಾಗೇಂದ್ರ ಸಹ ಇದೇ ಮನಸ್ಥಿತಿಯಲ್ಲಿದ್ದಾರೆ ಎಂದರು.
ಮೈಸೂರು ವಿವಿಯಲ್ಲಿ ಪ್ರತಾಪ ಸಿಂಹ ಅವರ ಕಾರ್ಯವೈಖರಿ ಏನು? ಒಬ್ಬರು ಸಿಂಡಿಕೇಟ್ ಸದಸ್ಯರ ಮೂಲಕ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ. ಇಲ್ಲಿನ ದಂಧೆ ಬಗ್ಗೆ ಮುಂದಿನ ದಿನಗಳಲ್ಲಿ ಜನರ ಮುಂದೆ ಇಡುವುದಾಗಿ ಲಕ್ಷ್ಮಣ್ ವಿವರಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ವಕ್ತಾರ ಮಹೇಶ್, ಈಶ್ವರ್ ಚಕ್ಕಡಿ, ಗಿರೀಶ್ ಮುಂತಾದವರಿದ್ದರು.
ಕಾಂಗ್ರೆಸ್ ಭರ್ಜರಿ ಗೆಲುವಿನ ಬಳಿಕ ಸಿ.ಟಿ.ರವಿ, ಆರ್.ಅಶೋಕ್, ಪ್ರತಾಪಸಿಂಹ ಆಕ್ಟಿವ್ ಆಗಿ ಅಟ್ಯಾಕ್ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಮುಂದುವರಿಸಿರುವುದು ರಾಜ್ಯದ ದುರಂತದ ಸಂಗತಿ.
-ಎಂ.ಲಕ್ಷ್ಮಣ್, ಕೆಪಿಸಿಸಿ ವಕ್ತಾರ
ಹತಾಶರಾದ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹತಾಶರಾಗಿ ಶೇ.೫೦ ಕಮಿಷನ್ ಸರ್ಕಾರ ಎಂದು ಟೀಕಿಸುತ್ತ ತಮ್ಮ ಗೌರವ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಎಂ.ಲಕ್ಷ್ಮಣ್ ಟೀಕಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಏನು ಮಾಡಿದರೂ ಪೇ ರೋಲ್ ನಡೆಯುವುದಿಲ್ಲ. ನಮಲ್ಲಿ ಆ ವ್ಯವಸ್ಥೆ ಇಲ್ಲ. ಈಗ ಜೆಡಿಎಸ್ ೧೯ ಶಾಸಕರಲ್ಲಿ ೧೨ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ೬, ೨೨ ಸ್ಥಾನಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ. ಒಂದರೆಡು ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಏನಾದರೂ ಲಾಭ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ. ಆದರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ನುಡಿದರು.