ಮೈಸೂರು: ಹಲವು ವರ್ಷಗಳಿಂದ ಬಂದ್ ಆಗಿದ್ದ ನಗರದ ಹೃದಯ ಭಾಗದಲ್ಲಿದ್ದ ವಿನೋಬಾ ರಸ್ತೆಗೆ ಮುಕ್ತಿ ಸಿಕ್ಕಿದ್ದು, ಗುರುವಾರ ಮೈಸೂರು ರಕ್ಷಣ ವೇದಿಕೆ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ರಸ್ತೆಗೆ ಹಾಕಿದ್ದ ಬೇಲಿಯನ್ನು ತೆರವುಗೊಳಿಸುವ ಮೂಲಕ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.
ನಗರದ ಕೆ.ಆರ್.ವೃತ್ತದ ಬಳಿ ಇರುವ ಮಕ್ಕಾಜಿ ಚೌಕದಲ್ಲಿನ ವಿನೋಬಾ ರಸ್ತೆಗೆ ಹಾಕಿದ್ದ ಬೇಲಿಯನ್ನು ತೆರವುಗೊಳಿಸುವಂತೆ ಮೈಸೂರಿನ ನಾಲ್ಕನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿದ ಹಿನ್ನೆಲೆ ರಸ್ತೆಗೆ ಅಳವಡಿಸಿದ್ದ ಬೇಲಿಯನ್ನು ತೆರವು ಮಾಡಲಾಗಿದೆ ಎಂದು ಮೈಸೂರು ರಕ್ಷಣಾ ವೇದಿಕೆಯ ಮೈ.ಕಾ. ಪ್ರೇಮ್‌ಕುಮಾರ್ ಹೇಳಿದರು.
ಏನಿದು ಘಟನೆ: ೨೦೨೭ರಲ್ಲಿ ಮೈಸೂರು ನಗರಪಾಲಿಕೆ ತನಗೆ ಸೇರಿದ್ದ ಮಕ್ಕಾಜಿ ಚೌಕದ ಜಾಗವನ್ನು ಅಭಿವೃದ್ಧಿ ದೃಷ್ಟಿಯಿಂದ ೨೫ ವರ್ಷದ ಅವಧಿಗೆ ಮೆವರಿ ಅಂಡ್ ಹೋಲ್ಡಿಂಗ್ಸ್ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಬಳಿಕ ಖಾಸಗಿ ಸಂಸ್ಥೆ ಮಕ್ಕಾಜಿ ಚೌಕದ ಜಾಗದೊಂದಿಗೆ ವಿನೋಬಾ ರಸ್ತೆಯನ್ನು ಸೇರಿಸಿ ಬೇಲಿ ನಿರ್ಮಿಸಿತು. ಇದನ್ನು ಪ್ರಶ್ನಿಸಿ ಮೈಸೂರು ನಗರದ ಸಾರ್ವಜನಿಕರು ಮತ್ತು ಮೈಸೂರು ರಕ್ಷಣ ವೇದಿಕೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿತ್ತು. ನಂತರ ಪಾಲಿಕೆ ಮತ್ತು ಖಾಸಗಿ ಸಂಸ್ಥೆ ಈ ತಡೆಯಾಜ್ಞೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು. ಹಲವು ವರ್ಷದ ಬಳಿಕ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಕೊನೆಗೆ ಹೈಕೋರ್ಟ್ ದಾವೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು. ಅರ್ಜಿದಾರರ ವಾದ ಆಲಿಸಿದ ನಾಲ್ಕನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂ.೧೨ಕ್ಕೆ ಕಾಯ್ದಿರಿಸಿ, ರಸ್ತೆಗೆ ಅಡ್ಡಲಾಗಿ ಹಾಕಿರುವ ಬೇಲಿಯನ್ನು ತೆರವು ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶದಂತೆ ವೇದಿಕೆಯ ಪದಾಧಿಕಾರಿಗಳು ಗುರುವಾರ ರಸ್ತೆ ತೆರವು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು.
