ಮೈಸೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಕಳಪೆ ಗುಣಮಟ್ಟದ, ಹಾಳಾಗಿರುವ ಮೊಬೈಲ್‌ಗಳನ್ನು ಹಿಂಪಡೆದು ಹೊಸ ಮೊಬೈಲ್ ನೀಡಬೇಕು, ಆರೋಗ್ಯ ಇಲಾಖೆಯ ಸಮೀಕ್ಷಾ ಕಾರ್ಯಕ್ಕೆ ಒತ್ತಡ ಹೇರುವುದನ್ನು ನಿಲ್ಲಿಸಿ, ಸರ್ಕಾರದ ೬ನೇ ಗ್ಯಾರಂಟಿ ಜಾರಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ನೀಡಿರುವ ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ಹಿಂಪಡೆದು ಹೊಸ ಮೊಬೈಲ್ ಹಾಗೂ ಮಿನಿ ಟ್ಯಾಬ್ ನೀಡಬೇಕು. ಆರೋಗ್ಯ ಇಲಾಖೆಯ ಹೆಚ್‌ಎನ್‌ಎಸ್ ಸರ್ವೆಯಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈ ಬಿಡಬೇಕು. ೨೦೧೧ರಿಂದ ನಿವೃತ್ತಿ ಹೊಂದಿದ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ೫ ಸಾವಿರ ನಿವೃತ್ತಿ ವೇತನ ನೀಡಬೇಕು. ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ೩ ಲಕ್ಷ ಇಡುಗಂಟು ನೀಡಬೇಕು. ಬಾಕಿ ಬಾಡಿಗೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಗ್ಯಾಸ್ ರೀಫಿಲ್ಲಿಂಗ್, ತರಕಾರಿ ಖರೀದಿಸಲು ಹಣ ನೀಡಬೇಕು. ಇಲಾಖೆಯಿಂದ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳಿಗೆ ಸಮವಸ್ತ್ರ, ಶೂ ವಿತರಿಸಬೇಕು. ಸಾದಿಲ್ವಾರು, ಇಸಿಸಿ ಹಾಗೂ ಫ್ಲಕ್ಸಿಫಂಡ್ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಮುಂಬಡ್ತಿ ಆಗಿರುವ ಸಹಾಯಕಿ ಹಾಗೂ ಮಿನಿ ಕಾರ್ಯಕರ್ತೆಯರಿಗೆ ಕೂಡಲೇ ಆದೇಶ ನೀಡಿ ಸಹಾಯಕಿಯರನ್ನು ನೇಮಕಾತಿ ಮಾಡಬೇಕು. ಗ್ರಾಜ್ಯುಟಿ ಆದೇಶವನ್ನು ಕೂಡಲೇ ಜಾರಿ ಮಾಡಬೇಕು. ಮೊಟ್ಟೆ ಟೆಂಡರ್ ರದ್ದುಗೊಳಿಸಿ ಮೊದಲಿನಂತೆ ಬಾಲವಿಕಾಸ ಸಮಿತಿಯ ಜಂಟಿ ಖಾತೆಗೆ ಹಣ ಜಮಾ ಮಾಡಬೇಕು. ಸರ್ಕಾರ ಘೋಷಿಸಿರುವ ೬ನೇ ಗ್ಯಾರಂಟಿಯಂತೆ ಕಾರ್ಯಕರ್ತೆಯರಿಗೆ ೧೫ ಸಾವಿರ, ಸಹಾಯಕಿಯರಿಗೆ ೧೦ ಸಾವಿರ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರುಗಳಾದ ವೈ.ಮಹದೇವಮ್ಮ, ಪುಟ್ಟಮ್ಮ, ಸುನಂದಾ, ಸರೋಜಮ್ಮ, ಭವ್ಯ, ಎಸ್.ಮಹದೇವಮ್ಮ, ಗಿರಿಜಾ, ಗೀತಾ, ತಾಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.