ಮೈಸೂರು: ರಕ್ತ ನೀಡಿ, ಪ್ಲಾಸ್ಮ ನೀಡಿ, ಜೀವನ ಹಂಚಿಕೊಳ್ಳಿ, ಹೆಚ್ಚಾಗಿ ಹಂಚಿಕೊಳ್ಳಿ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವ ರಕ್ತದಾನಿಗಳ ದಿನವನ್ನು ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ರಕ್ತ ಕೇಂದ್ರ ವಿಭಾಗ, ಪ್ಯಾಥಾಲಜಿ ವಿಭಾಗ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಮತ್ತು ಎನ್‌ಎಸ್‌ಎಸ್ ಘಟಕ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್‌ನ ಸಹಯೋಗದೊಂದಿಗೆ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಂಭಾಗಣದಲ್ಲಿ ಆಚರಿಸಲಾಯಿತು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರಕ್ತದಾನ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಕ್ಕೊಳಗಾದವರಿಗೆ ಮತ್ತು ರಕ್ತದ ಅವಶ್ಯಕತೆಯಿರುವ ರೋಗಿಗಳಿಗೆ ರಕ್ತದ ಕೊರತೆ ಹೆಚ್ಚಾಗುತ್ತಲೇ ಇದ್ದು, ಇದನ್ನು ಸರಿದೂಗಿಸಲು ಯುವ ಸಮೂಹ ನಿರಂತರವಾಗಿ ರಕ್ತದಾನ ಮಾಡುವಂತೆ ಕರೆ ನೀಡಿ, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿರುವ ಎಲ್ಲರಿಗೂ ಶುಭಾಶಯ ಕೋರಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಮಾತನಾಡಿ, ರಕ್ತದಾನದ ಮಹತ್ವ ಮತ್ತು ಮೌಲ್ಯ ವಿವರಿಸುತ್ತಾ ನಿರಂತರವಾಗಿ ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಆರೋಗ್ಯಕ್ಕೆ ಸಂಬಂಧಿಸಿದ ಲಾಭಗಳ ಕುರಿತು ಜಾಗೃತಿ ಮೂಡಿಸಿ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ನಿರಂತರವಾಗಿ ರಕ್ತದಾನ ಮಾಡುವಂತೆ ಪ್ರೇರೇಪಿಸಿದರು.
ನಿರಂತರವಾಗಿ ರಕ್ತದಾನ ಮಾಡಿರುವ ಡಾ.ಅನುಪಮಾ ಸುಂದರ್, ಡಾ.ಯುವರಾಜ್ ನಾಥ್, ಕೆ.ನವೀನ್ ಅವರನ್ನು ಸನ್ಮಾನಿಸಿಲಾಯಿತು. ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರೋಗಿಗಳಿಗೆ ನೆರವಾಗುತ್ತಿರುವ ಸಂಘ-ಸಂಸ್ಥೆಗಳ ಸದಸ್ಯರಿಗೆ ಸನ್ಮಾನಿಸಿಲಾಯಿತು.
ವಿಶ್ವ ರಕ್ತದಾನಿಗಳ ದಿನಾಚರಣೆಯಂದು ಸ್ವಯಂ ಪ್ರೇರಿತರಾಗಿ ೯೦ ದಾನಿಗಳು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಉಪನಿರ್ದೇಶಕ ಡಾ.ಮಂಜುನಾಥ್, ಜೆಎಸ್‌ಎಸ್ ಆಸ್ಪತ್ರೆಯ ರಕ್ತ ಕೇಂದ್ರದ ಅಧಿಕಾರಿ ಡಾ.ಪಿ.ಪಲ್ಲವಿ, ಲೋಕೇಶ್, ಡಾ.ಸಿ.ಎಸ್.ಶೀಲಾದೇವಿ, ಅಶ್ವಥಿ ದೇವಿ ಸೇರಿದಂತೆ ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ಮತ್ತು ಆಸ್ಪತ್ರೆಯ ಎಲ್ಲ ವಿಭಾಗದ ಮುಖ್ಯಸ್ಥರುಗಳು, ಸಿಬ್ಬಂದಿ, ಜೆಎಸ್‌ಎಸ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.