ಮೈಸೂರು: ಶಾಮಿಯಾನ, ಡೆಕೋರೆಟೆಡ್ ಗೋದಾಮಿನಲ್ಲಿ ಗುರುವಾರ ಮುಂಜಾನೆ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರೂ.ಮೌಲ್ಯದ ವಸ್ತುಗಳ ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಫೈರಿಂಗ್ ರೆಂಜ್ ಬಳಿ ನಡೆದಿದೆ.
ಸಂಗಮ್ ಶಾಮಿಯಾನ ಗೋದಾಮು ನಗರದ ಷರೀಫ್ ಎಂಬುವರ ಅಳಿಯನಿಗೆ ಸೇರಿದ್ದಾಗಿದೆ. ಇವರು ಮೈಸೂರು ನಗರ ಮತ್ತು ಸುತ್ತಲಿನ ಊರುಗಳಲ್ಲಿ ನಡೆಯುವ ಸಮಾರಂಭಗಳಿಗೆ ಶಾಮಿಯಾನ, ಸ್ಟೇಜ್ ಹಾಕುವುದರಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಗುರುವಾರ ಮುಂಜಾನೆ ೩.೩೦ರ ಸಮಯದಲ್ಲಿಯೇ ಗೋದಾಮಿನಲ್ಲಿ ಬೆಂಕಿ ಸಂಭವಿಸಿದ್ದು, ಅಲ್ಲಿ ಯಾರೂ ಇರಲಿಲ್ಲವಾದ್ದರಿಂದ ಬೆಂಕಿ ಬಿದ್ದಿರುವುದು ತಿಳಿದು ಬಂದಿರಲಿಲ್ಲ. ಬೆಂಕಿ ಉಂಟಾಗಿ ಸುಮಾರು ಮೂರು ಗಂಟೆಯ ನಂತರ ಬೆಳಗ್ಗೆ ಸುಮಾರು ೬.೩೦ರ ಸಮಯದಲ್ಲಿ ಬೆಂಕಿ ಉರಿ ತೀವ್ರವಾಗಿದ್ದು, ಅದರ ಹೊಗೆ ದಟ್ಟವಾಗಿ ಮೋಡ ಆವರಿಸಿದೆ. ಅಲ್ಲದೇ, ಗೋದಾಮಿನ ಮೇಲ್ಚಾವಣಿ ಶೀಟ್‌ಗಳು ಕುಸಿದಿವೆ. ಈ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಯುವಿಹಾರಕ್ಕೆ ಹೋದವರು. ಸ್ಥಳಕ್ಕೆ ಹೋಗಿ ನೋಡಿ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಬೆಂಕಿ ನಂದಿಸಿದ್ದಾರೆ. ನಗರದ ಸರಸ್ವತಿಪುರಂ, ಹೆಬ್ಬಾಳ ಹಾಗೂ ಬನ್ನಿಮಂಟಪದಿಂದ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಮೂರೂ ಅಗ್ನಿಶಾಮಕ ಠಾಣೆಗಳಿಂದ ೫೦ ಸಿಬ್ಬಂದಿ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕಾರ್ಯಾಚರಣೆ ಹೆಚ್ಚು ತಡವಾಗಿದ್ದರೆ, ಬೆಂಕಿ ಅಕ್ಕಪಕ್ಕದ ಸ್ಥಳಕ್ಕೂ ಆವರಿಸುವ ಸಾಧ್ಯತೆಯಿದ್ದು, ಪಕ್ಕದಲ್ಲಿಯೇ ಚಾಮುಂಡಿ ಬೆಟ್ಟದ ಅರಣ್ಯವೂ ಇರುವುದಿಂದ ಅಲ್ಲಿಗೂ ಬೆಂಕಿ ವಿಸ್ತರಿಸುವ ಸಾಧ್ಯತೆಯೂ ಇತ್ತು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬೆಂಕಿ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಿ, ಬೆಂಕಿ ನಂದಿಸಿದ್ದಾರೆ.
ಇಲ್ಲಿದ್ದ ವಿವಿಧ ಬಗೆಯ ದುಬಾರಿ ಮೌಲ್ಯದ ಶಾಮಿಯಾನ ಪೀಸ್‌ಗಳು, ಅಲ್ಲಿದ್ದ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು ೯೦ ಲಕ್ಷ ರೂ. ನಷ್ಟವಾಗಿದೆ ಎನ್ನಲಾಗಿದೆ. ಬೆಂಕಿ ಹೇಗೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮಯ್ಯ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ಸ್ಥಳ ಪರಿಶೀಲನೆ ನಡೆಸಿ, ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.