ಮೈಸೂರು: ಸಂಗೀತ ಕೇಳದ ವ್ಯಕ್ತಿ ಮಾನವೀಯತೆ ಇಲ್ಲದ ಕ್ರೂರಿಯೂ, ರಕ್ಕಸಿಯೂ ಆಗಿರುತ್ತಾನೆ ಎಂದು ಆಕಾಶವಾಣಿ ಉದ್ಘೋಷಕ ಮೈಸೂರು ಉಮೇಶ್ ಅಭಿಪ್ರಾಯಪಟ್ಟರು.
ನಗರದ ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಪದ್ಮಜಾ ಪ್ರಸಾದ್ ಸ್ಮರಣಾರ್ಥ ಅಂತರ ಕಾಲೇಜು ಸಂಗೀತ ಸ್ಪರ್ಧೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ನಮಗೆ ಭಕ್ತಿ ಮತ್ತು ಸನ್ಮಾರ್ಗ ತೋರುತ್ತದೆ. ಪ್ರತಿಯೊಬ್ಬರು ಮನಸ್ಸನ್ನು ಶುದ್ಧವಾಗಿಡಲು ಸಂಗೀತ, ಸಾಹಿತ್ಯ ಪ್ರೇರಕವಾಗುತ್ತದೆ. ಆದರೆ, ಇಂದಿನ ತಾಂತ್ರಿಕ ಯುಗದ ಶಿಶುಗಳಾಗಿರುವ ಯುವ ಮನಸ್ಸುಗಳು ಮೊಬೈಲ್ ಗೀಳಿಗೆ ಜೋತುಬಿದ್ದು, ಅದನ್ನೆ ತಮ್ಮ ಬದುಕು ಎಂದುಕೊಂಡು ನಮ್ಮ ಪೂರ್ವಿಕರು ಪೋಷಿಸುತ್ತಾ ಬಂದಿರುವ ಜಾನಪದ, ದಾಸಪದ, ವಚನ ಸಾಹಿತ್ಯಗಳನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಗತ್ತಿನ ಯಾವುದೇ ಚರಿತ್ರೆ ನೋಡಿದರೂ ಅಲ್ಲಿ ಸಿಗುವುದು ರಕ್ತಸಿಕ್ತ ಇತಿಹಾಸ ಮಾತ್ರ. ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಮೈಸೂರು ಸಂಸ್ಥಾನ ಕೇವಲ ಖಡ್ಗಾಡಳಿತಕ್ಕೆ ಸೀಮಿತವಾಗದೆ, ಸಾಂಸ್ಕೃತಿಕವಾಗಿ ಇಡೀ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಇಲ್ಲಿನ ರಾಜ ಮಹಾರಾಜರು ಕೇವಲ ಕತ್ತಿ ಹಿಡಿದು ಆಳ್ವಿಕೆ ಮಾಡುವುದಕ್ಕೆ ಸೀಮಿವಾಗಿರದೆ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ತಮ್ಮ ಆಸ್ಥಾನದಲ್ಲಿ ಸಾಕಷ್ಟು ಪ್ರೋತ್ಸಾಹ ನೀಡಿ ದೊಡ್ಡ ಸಾಂಸ್ಕೃತಿಕ ಜಗತ್ತನ್ನೇ ಕಟ್ಟಿದ್ದಾರೆ. ಆದ್ದರಿಂದಲೇ ಈ ನೆಲಕ್ಕೆ ಜಾಗತಿಕ ಮನ್ನಣೆ ದೊರೆತಿದೆ ಎಂದು ಹೇಳಿದರು.
ನಾಲ್ವಡಿ, ಜಯಚಾಮರಾಜ ಹಾಗೂ ಶ್ರೀಕಂಠದತ್ತ ಒಡೆಯರ್ ಅವರಿಗೂ ಸಂಗೀತ, ಸಾಹಿತ್ಯದ ಮೇಲೆ ಅಪಾರ ಪ್ರೀತಿ, ಗೌರವವಿತ್ತು. ಹೀಗಾಗಿಯೇ ಪೊಲೀಸ್ ಬ್ಯಾಂಡ್, ಕರ್ನಾಟಕ ಬ್ಯಾಂಡ್ ಇಂದಿಗೂ ನಡೆಯುತ್ತದೆ. ಶ್ರೀಕಂಠದತ್ತ ಒಡೆಯರ್ ಅವರೂ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಮಹಾರಾಜ ಕಾಲೇಜಿಗೆ ಆಗಮಿಸುವಾಗ ರೋಮಾಂಚನ ಮತ್ತು ಗೌರವ ಉಂಟಾಗಾಗುತ್ತದೆ. ಕುವೆಂಪು, ಅಡಿಗರು ಈಗಲೂ ನಮ್ಮ ನಡುವೆ ಇರುವ ಐಕಾನ್‌ಗಳು. ಇದಕ್ಕೆ ನಾವು ಹೆಮ್ಮೆ ಪಡಬೇಕು ಎಂದರು.
ಇದಲ್ಲದೇ ಜನರ ರಾಷ್ಟ್ರಪತಿ ಎಂದೇ ಪ್ರಖ್ಯಾತರಾದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಸಂಗೀತ ಪ್ರಿಯರಾಗಿದ್ದರು. ಅಂಬೇಡ್ಕರ್ ಪುಸ್ತಕಗಳೊಂದಿಗೆ ಹೆಚ್ಚು ನಂಟು ಹೊಂದಿದ್ದರು. ಅವರೊಬ್ಬ ಉತ್ತಮ ವೈಲಿನ್ ಪ್ರಿಯರಾಗಿದ್ದರು. ನಮ್ಮ ವಿದ್ಯಾರ್ಥಿಗಳ ಕಣ್ಣಿಗೆ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರು ಮಾತ್ರ ಐಕಾನ್‌ಗಳೆಂದು ಕಾಣಿಸುತ್ತಾರೆ. ಆದರೆ, ಸಂಗೀತ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿರುವವರ ಪಟ್ಟಿಯೇ ನಮ್ಮಲಿದೆ. ಆದ್ದರಿಂದ ವಿದ್ಯಾರ್ಥಿಗಳು ಓದಿಗೆ ಮಾತ್ರ ಸೀಮತವಾಗದೆ, ಸಂಗೀತ, ಸಾಹಿತ್ಯದಲ್ಲಿಯೂ ಆಸಕ್ತಿ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ಆರ್.ಎನ್.ಪದ್ಮನಾಬ್ ಮಾತನಾಡಿ, ಪದ್ಮಜಾ ಪ್ರಸಾದ್ ಅವರ ಸ್ಮರಣಾರ್ಥವಾಗಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಸಂಗೀತ ಸ್ಪರ್ಧೆ ಆಯೋಜಿಸಲಾಗುತ್ತಿದೆ. ಕೋವಿಡ್ ಕಾರಣದಿಂದ ಹಾಗೂ ಗುಜರಾತ್ ಪ್ರವಾಹ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಈ ಸ್ಪರ್ಧೆ ನಡೆಸಲು ಸಾಧವಾಗಲಿಲ್ಲ ಎಂದು ಹೇಳಿದರು.
ಪಿಪಿಎಂ ಸಂಸ್ಥೆಯ ಮುಖ್ಯಸ್ಥ ಎನ್.ಎನ್.ಪ್ರಸಾದ್, ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಎ.ಶ್ರೀಧರ್, ಕಾಲೇಜು ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ, ಸಮಿತಿ ಸಂಚಾಲಕ ಡಾ.ಲೋಕೇಶ್.ಸಿ ಇದ್ದರು.
ಸಂಗೀತ ಕೇಳದವವರು ಕ್ರೂರಿ, ರಕ್ಕಸಿ
RELATED ARTICLES