
ಮೈಸೂರು: ಶಾಲೆಗೆ ಸೇರಬೇಕಾದ ಮಕ್ಕಳನ್ನು ಕೆಲಸಕ್ಕೆ ಕಳುಹಿಸದಂತೆ ತಡೆಯಲು ಪೋಷಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಕ್ಷ ಜಿ.ಎಸ್.ಸಂಗೇಶ್ರಿ ಅಭಿಪ್ರಾಯಪಟ್ಟರು.
ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚಾರಣೆ ಅಂಗವಾಗಿ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆಂಬ ಉದ್ದೇಶದಿಂದ ಕಳೆದ ೨೧ ವರ್ಷಗಳಿಂದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಆಚರಣೆ ಮಾಡಲಾಗುತ್ತಿದೆ. ೧೪ ವರ್ಷ ವಯೋಮಾನದ ಮಕ್ಕಳನ್ನು ಯಾವುದೇ ರೀತಿಯ ಮನೆ ಕೆಲಸ, ಕೃಷಿ, ಹೊಟೇಲ್, ಕಾರ್ಖಾನೆಗಳಂತಹ ಅಪಾಯಕಾರಿ ಕೆಲಸಗಳಿಗೆ ಬಳಸಿಕೊಳ್ಳುವುದು ಸಂವಿಧಾನ ವಿರೋಧಿ. ಹೀಗಾಗಿ ಅಂತಹ ಮಕ್ಕಳನ್ನು ಗುರುತಿಸಿ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ೧೯೮೩ರಲ್ಲಿ ಕಾಯಿದೆ ಜಾರಿಗೆ ಬಂತು. ಈ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಸಂಘಟಿತ ಪ್ರಯತ್ನ ಮಾಡದಿದ್ದರೆ ಮಕ್ಕಳು ಶೋಷಣೆಗೆ ಬಲಿಯಾಗುತ್ತಾರೆ. ಪ್ರತಿ ವರ್ಷವೂ ದಿನಾಚರಣೆ ಮಾಡುತ್ತೇವೆ. ಆದರೆ, ಎಷ್ಟು ಮಕ್ಕಳನ್ನು ಕೆಲಸದಿದಂದ ಬಿಡಿಸಿದ್ದೇವೆ ಎಂಬುದು ಮುಖ್ಯ. ಕೋವಿಡ್ ಸಮಯದಲ್ಲಿ ಎಲ್ಲಾ ಕ್ಷೇತ್ರಗಳನ್ನು ಅಲುಗಾಡಿಸಿತು. ಈ ಸಮಯದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾದರು. ಈ ಮಕ್ಕಳು ನಿಷೇಧಿತ ಪದ್ಧತಿಗೆ ಹೋಗುವ ಆತಂಕ ಇತ್ತು. ಅಲ್ಲದೇ ಕೆಲವೆಡೆ ಇನ್ನೂ ಈ ಪದ್ಧತಿ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಎಲ್ಲರ ಸಹಕಾರ ಬೇಕು. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಸಮಾಜ ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಹೋಟೆಲ್ ಉದ್ಯಮ, ರಸ್ತೆ ಬದಿಯಲ್ಲಿ ಇಂದಿಗೂ ಬಾಲಕಾರ್ಮಿಕ ಪದ್ಧತಿ ಇದೆ. ಈ ವಯಸ್ಸಿನ ಮಕ್ಕಳಲ್ಲಿ ಹಾರ್ಮೋನ್ ಬದಲಾವಣೆ ಆಗುತ್ತಿರುತ್ತದೆ. ಈ ಸಮಯದಲ್ಲಿ ಅವರ ಮನಸ್ಸು ಬೇರೆ ಕಡೆ ತುಡಿಯುತ್ತದೆ. ಆದ್ದರಿಂದ ಈ ಸಮಯದಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎಂದರು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಪೋಷಕರ ಪ್ರೋತ್ಸಾಹ ಅಗತ್ಯ. ಶಾಲೆ ಸಮಯ ಬಿಟ್ಟು ಅಪಾಯಕಾರಿ ಕೆಲಸಗಳನ್ನು ಮಾಡಿಸುವುದು ಅಪರಾಧ. ಇಂತಹ ಸಾಮಾಜಿಕ ಪಿಡುಗನ್ನು ತಡೆಗಟ್ಟಬೇಕು. ದೇಶ ಸುಭದ್ರವಾಗಬೇಕಾದರೆ ಮಕ್ಕಳ ಕನಸನ್ನು ಸಾಕಾರಗೊಳಿಸುವಂತಹ ವಾತಾವರಣ ಇರಬೇಕು. ಅವರಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕು. ದುಡ್ಡು ಇರುವವರು ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಬೇಕು. ಮೈಸೂರನ್ನು ಬಾಲ ಕಾರ್ಮಿಕ ಮುಕ್ತ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಓವೆಲ್ ಮೈದಾನದಿಂದ ಕಲಾಮಂದಿರದವರೆಗೆ ವಿವಿಧ ಶಾಲೆಗಳ ನೂರಾರು ಮಕ್ಕಳಿಂದ ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್.ಬಿ.ಜಿ, ಜಿಪಂ ಸಿಇಒ ಡಾ.ಕೆ.ಎಂ.ಗಾಯತ್ರಿ, ಸಿಸಿಬಿ ಸಂದೇಶ್ ಕುಮಾರ್, ಸಹಾಯಕ ಕಾರ್ಮಿಕ ಆಯುಕ್ತೆ ನಾಜೀಯಾ ಸುಲ್ತಾನ್, ಜಿ ಹೋಟೆಲ್ ಮಾಲೀಕರ ಸಂಘದ ಅಧಕ್ಷ ನಾರಾಯಣ್ ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.