ಗುಂಡ್ಲುಪೇಟೆ: ತಾಲೂಕಿನ ಅಣ್ಣೂರು ಕೇರಿ ಗ್ರಾಮದಲ್ಲಿ ಸಮಪರ್ಕವಾಗಿ ಬಸ್ ನಿಲುಗಡೆ ಮಾಡದ ಕ್ರಮ ಖಂಡಿಸಿ ನೂರಾರು ಮಂದಿ ವಿದ್ಯಾರ್ಥಿಗಳು ರಸ್ತೆ ಬಂದ್ ಮಾಡಿ ಸೋಮವಾರ ಪ್ರತಿಭಟನೆ ನಡೆಸಿದರು.
ಅಣ್ಣೂರುಕೇರಿ ಗ್ರಾಮದಲ್ಲಿ ಕೆಎಸ್‍ಆರ್ಟಿಸಿ ಬಸ್ ತಡೆದು ರಸ್ತೆ ಮಧ್ಯೆದಲ್ಲೇ ಕುಳಿದ ವಿದ್ಯಾರ್ಥಿಗಳು ಡಿಪೆÇೀ ವ್ಯವಸ್ಥಾಪಕರು ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು, ಅಣ್ಣೂರುಕೇರಿ ಗ್ರಾಮವು ಪಟ್ಟಣದಿಂದ 3ಕಿ.ಮೀ ಅಂತರವಿದ್ದು, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಶಾಲಾ-ಕಾಲೇಜಿಗೆ ಹೋಗುತ್ತಾರೆ. ಬೊಮ್ಮಲಾಪುರ, ಬಾಚಹಳ್ಳಿ, ಕುಂದಕೆರೆ ಮಾರ್ಗಗಳಿಂದ ಗ್ರಾಮದ ಮೂಲಕ ಪಟ್ಟಣದ ಕಡೆಗೆ ತೆರಳುತ್ತಿದ್ದ ಬಸ್‍ಗಳು ನಿಲುಗಡೆ ಮಾಡದೆ ತೆರಳುವ ಕಾರಣ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿನಿತ್ಯ ಗುಂಡ್ಲುಪೇಟೆ ಪಟ್ಟಣಕ್ಕೆ ಸರ್ಕಾರಿ ನೌಕರಿ, ವ್ಯಾಪಾರ, ಕಟ್ಟಡ ನಿರ್ಮಾಣ ಇತರೆ ಕೆಲಸಗಳಿಗೆ ಕಾರ್ಮಿಕರು ಹೋಗಬೇಕಿದೆ. ಬೆಳಗಿನ ವೇಳೆ ಬಸ್ ರಶ್ ಕಾರಣ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದ ನಿಗಧಿತ ಸಮಯಕ್ಕೆ ವಿದ್ಯಾರ್ಥಿಗಳ ಜೊತೆಗೆ ವ್ಯಾಪಾರ ಹೋಗಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಮನವರಿಕೆ ಮಾಡಿದರೂ ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ, ಇಲ್ಲವಾದರೆ ಹಿಂದೆ ಇದ್ದಂತೆ ಕೋಡಹಳ್ಳಿ ಗ್ರಾಮದಿಂದ ಬಸ್ ರಿಟರ್ನ್ ಆಗುವ ವ್ಯವಸ್ಥೆ, ಬೆಂಡರವಾಡಿ ಗ್ರಾಮ ಮಾರ್ಗದ ಸಾರಿಗೆ ಬಸ್ ನಮ್ಮೂರಿನ ಮೂಲಕ ಸಂಚರಿಸುವ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು.
ಮಾಹಿತಿ ಅರಿತ ಘಟಕ ವ್ಯವಸ್ಥಾಪಕರಾದ ಪುಷ್ಪ ಸ್ಥಳಕ್ಕಾಗಮಿಸಿ ಮನವಿ ಆಲಿಸಿ, ಗ್ರಾಮಕ್ಕೆ ಹೆಚ್ಚುವರಿ ಬಸ್ ಸೇವೆ ಆರಂಭಿಸುತ್ತೇವೆ. ಬೆಂಡರವಾಡಿ ಮಾರ್ಗದಲ್ಲಿ ಬರುವ ಬಸ್‍ಗಳಲ್ಲಿ ಗ್ರಾಮ ಮಾರ್ಗದಲ್ಲಿ ಸಂಚರಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಘಟಕ ವ್ಯವಸ್ಥಾಪಕರು ನೀಡಿದ ಭರವಸೆಗೆ ಜನರು ಒಪ್ಪಲಿಲ್ಲ. ನಂತರ ಸಬ್‍ಇನ್ಸ್‍ಪೆಕ್ಟರ್ ಕಿರಣ್ ಪ್ರತಿಭಟನಕಾರರ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನ ಆಗಲಿಲ್ಲ. ಮಧ್ಯಾಹ್ನ ವೇಳೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಒಪ್ಪಿಕೊಂಡು ಪ್ರತಿಭಟನೆ ಕೈ ಬಿಟ್ಟರು.
ಸಂಚಾರ ವ್ಯತ್ಯಯ: ಅಣ್ಣೂರುಕೇರಿ ಮಾರ್ಗ ತಾಲೂಕಿನ ದಕ್ಷಿಣದ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ರಸ್ತೆ ತಡೆ ನಡೆಸಿದ ಪರಿಣಾಮ ಮಾರ್ಗದಲ್ಲಿ ಸಂಚರಿಸಲು ಅವಕಾಶವಿಲ್ಲದೇ ವಾಹನ ಚಾಲಕರು, ಬೈಕ್ ಸವಾರರು ಗಂಟೆಗಟ್ಟಲೇ ಕಾದು ನಿಲ್ಲಬೇಕಾಯಿತು. ಕೆಲವರು ವಿಧಿಯಿಲ್ಲದೇ ವಡ್ಡನಹೊಸಹಳ್ಳಿ, ಬೆಂಡರವಾಡಿ, ಬಸವಾಪುರ ಮಾರ್ಗದಲ್ಲಿ, ಅಣ್ಣೂರು, ಬೆಟ್ಟಹಳ್ಳಿ, ದೊಡ್ಡತುಪ್ಪೂರು ಮಾರ್ಗವಾಗಿ ಪಟ್ಟಣ ಬಂದರು.
ಪ್ರತಿಭಟನೆಯಲ್ಲಿ ಅಣ್ಣೂರುಕೇರಿ ಗ್ರಾಮದ ನೂರಾರು ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಮತ್ತು ಯುವಕರು ಹಾಜರಿದ್ದರು.