ಮೈಸೂರು: ನಾಡುಕಟ್ಟಿದ ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನು ಸಾಕಷ್ಟು ಗೊಂದಲಮಯವಾಗಿಸಿದ್ದಾರೆ. ಇತಿಹಾಸ ಬರೆಯುವವರು ಸತ್ಯ ಬರೆಯಲಾಗದಿದ್ದರೂ ಸುಳ್ಳು ಹೇಳಬಾರದು. ಸರ್ಕಾರ ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯದಲ್ಲಿ ಕೆಂಪೇಗೌಡರ ಪಠ್ಯ ಅಳವಡಿಸುವ ಕೆಲಸ ಮಾಡಬೇಕು ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಟ್ಟುವ ಪದಕ್ಕೆ ಪರ್ಯಾಯ ಪದವೇ ಕೆಂಪೇಗೌಡ. ಕೆಂಪೇಗೌಡರ ವಂಶದಲ್ಲಿ ೯ ಮಂದಿ ಕೆಂಪೇಗೌಡರು ಇದ್ದಾರೆ. ಈ ಪೈಕಿ ಹಿರಿಯ ಕೆಂಪೇಗೌಡರೇ ನಾಡಪ್ರಭುಗಳು. ಕೃಷಿಕರಾಗಿದ್ದ ಅವರು ಜನ ಸಮೂಹದ ನಡುವೆಯಿದ್ದುಕೊಂಡು ನಾಡ ಮತ್ತು ಜನರ ಸಮೂಹ ಕಟ್ಟಿದವರು ಎಂದರು.
ಕೆಂಪೇಗೌಡರ ಇತಿಹಾಸವನ್ನು ಸಾಕಷ್ಟು ಗೊಂದಲಮಯವಾಗಿಸಿದ್ದಾರೆ. ಇತಿಹಾಸ ಬರೆಯುವವರು ಸತ್ಯ ಬರೆಯಲಾಗದಿದ್ದರೂ ಸುಳ್ಳು ಬರೆಯಬಾರದು. ಕೆಂಪೇಗೌಡರನ್ನು ಕೇವಲ ವಿಜಯನಗರ ಅರಸರ ಸಾಮಂತರಾಗಿದ್ದು, ಪಾಳೇಗಾರರು ಎಂಬುದಕ್ಕೆ ಮಾತ್ರ ಸೀಮಿತಗೊಳಿಸಿದ್ದಾರೆ. ಕೆಂಪೇಗೌಡರ ಸಂಸ್ಥಾನ ಪಿರಿಯಾಪಟ್ಟಣದವರೆಗೂ ವಿಸ್ತರಣೆಗೊಂಡಿತ್ತು. ವಿಜಯನಗರ ಸಾಮ್ರಾಜ್ಯ ಮೆರೆಯಲು ಸಿಂಹಪಾಲು ಕೆಂಪೇಗೌಡರದು ಎಂದರು.
ಮೈಸೂರು ಮಹಾರಾಜರು ಕುಂಬಾರಗೇರಿ, ಸುಣ್ಣದಕೇರಿ, ಕುರುಬರಗೇರಿ ಹೀಗೆ ಬಡಾವಣೆಗಳನ್ನು ಮಾಡಲು ಕೆಂಪೇಗೌಡರೇ ಪ್ರೇರಣೆ. ಕೆಂಪೇಗೌಡರು ಬೆಂಗಳೂರಿನಲ್ಲಿ ತಿಗಳರಪೇಟೆ, ಉಪ್ಪಾರಪೇಟೆ ಹೀಗೆ ಬಡಾವಣೆಗಳನ್ನು ಮಾಡಿದರು. ಇದು ಮೈಸೂರು ಮಹಾರಾಜರಿಗೂ ಸ್ಪೂರ್ತಿಯಾಯಿತು. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಉಳಿಸಿಕೊಳ್ಳುವತ್ತ ಸರ್ಕಾರ ಎಚ್ಚರವಹಿಸಬೇಕು ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ೨೦೧೫ರಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸುಮಾರು ೬೦ ಸಾವಿರ ಒಕ್ಕಲಿಗರು ಸಮಾವೇಶಗೊಂಡು ಮಾಡಿದ ಮನವಿ ಮತ್ತು ಆಗ್ರಹದಿಂದ ಇಂದು ಸರ್ಕಾರದಿಂದ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ. ಅಂದು ನಾವು ಮಾಡಿದ ಮನವಿಗೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಯಂತಿಯನ್ನು ಸರ್ಕಾರದಿಂದಲೇ ಮಾಡಲು ಒಪ್ಪಿದ್ದರು. ಅಲ್ಲದೇ, ಕೆಂಪೇಗೌಡರ ಹೆಸರಿನಲ್ಲಿ ಪ್ರಾಧಿಕಾರ ಸ್ಥಾಪಿಸಿದರು ಎಂದರು.
ಇಂದು ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಡಲಾದ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯಿಂದಾಗಿ ಅವರ ಇತಿಹಾಸ ವಿಶ್ವವ್ಯಾಪಿಯಾಗುತ್ತಿದೆ. ಎಲ್ಲರೂ ಒಗ್ಗಟಿನಿಂದ ಜಯಂತಿ ಮಾಡಬೇಕು. ಯಶಸ್ವಿಯಾದಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಒಕ್ಕಲಿಗರಲ್ಲಿ ಒಗ್ಗಟ್ಟು ಮತ್ತು ಸಂಘಟನೆಯ ಕೊರತೆ ಇದೆ. ಕಳೆದ ವರ್ಷದ ಜಯಂತಿಯಲ್ಲಿ ೫ ಸಾವಿರ ಜನರು ಸೇರಿದ್ದರು. ಚುನಾವಣೆ ಮುಗಿದ ನಂತರ ಸಂಘಟನೆ ಕಡಿಮೆಯಾಗಿದೆ. ಈ ರೀತಿ ಆಗಬಾರದು. ಸಂಘಟನೆ ನಿರಂತರವಾಗಿರಬೇಕು. ಸಮುದಾಯದಲ್ಲಿ ಹಿಂದುಳಿದವರಿಗೆ ಬೆಳೆಯಲು ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಂದರು.
ನಮ್ಮ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೈಸೂರು ವಿವಿಯಲ್ಲಿ ಒಂದು ದತ್ತಿ ಸ್ಥಾಪಿಸುವ ಅಗತ್ಯವಿದ್ದು, ಇದನ್ನು ಹಿರಿಯರಾದ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿಯೇ ಮಾಡಬೇಕಿದ್ದು, ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕಲಿಗ ಸಮುದಾಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸದ ಪ್ರತಾಪ್‌ಸಿಂಹ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಉಪ ಮೇಯರ್ ಡಾ.ಜಿ.ರೂಪಾ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ.ಗೋವಿಂದರಾಜು, ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಾಜ್ಯ ಒಕ್ಕಲಿಗರ ಸಂಘದ ಜಂಟಿ ಕಾರ್ಯದರ್ಶಿ ಗಂಗಾಧರ್, ಒಕ್ಕಲಿಗರ ಸಂಘದ ಮೈಸೂರು-ಚಾಮರಾಜನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿ, ಸಮುದಾಯದ ಮುಖಂಡರಾದ ಮೋಹನ್ ಕುಮಾರ್ ಗೌಡ, ರವಿಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ಅದ್ದೂರಿ ಮೆರವಣಿಗೆ: ಕೆಂಪೇಗೌಡ ಜಯಂತಿ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಕಲಾಮಂದಿರವದರೆಗೆ ಅಲಂಕೃತಗೊಂಡಿದ್ದ ವಿಶೇಷ ವಾಹನದಲ್ಲಿ ಕೆಂಪೇಗೌಡರ ಪ್ರತಿಮೆಯ ಮೆರವಣಿಗೆ ಮಾಡಲಾಯಿತು. ಮೆರವಣಿಗೆಗೆ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡಿದವು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಯುವಕರಿಗೆ ಪ್ರೇರಣಾ ಶಕ್ತಿ. ಯುವಕರು ಜಾತಿ, ಧರ್ಮದ ಗುಂಗಿನಲ್ಲಿ ಸಿಲುಕದೇ ಕೆಂಪೇಗೌಡರನ್ನು ಪ್ರೇರಣಾ ಶಕ್ತಿಯಾಗಿ ಸ್ವೀಕರಿಸಿ ರಾಜ್ಯ, ದೇಶ ಕಟ್ಟಲು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
೪ ದಿಕ್ಕುಗಳಲ್ಲಿ ದ್ವಾರ ರಚಿಸಿ ವಾಣಿಜ್ಯ, ವಹಿವಾಟಿಗೆ ಅವಕಾಶ ಕಲ್ಪಿಸಿದರು. ಕೆರೆಗಳ ನಿರ್ಮಾಣ, ಕೃಷಿಗೆ ಉತ್ತೇಜನ ನೀಡಿದರು. ಜನಪರವಾದ ಆಡಳಿತ ಕೊಟ್ಟರು. ಇವತ್ತು ಬೆಂಗಳೂರು ಬೃಹದಾಕಾರದಲ್ಲಿ ಬೆಳೆಯಲು ಭದ್ರ ಅಡಿಪಾಯ ಹಾಕಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಲಿಕಾನ್ ಸಿಟಿಯಾಗಿ ಗುರುತಿಸಿಕೊಂಡಿದೆ. ಬೆಂಗಳೂರು ನಗರವನ್ನು ಪೂರ್ಣವಾಗಿ ಕಟ್ಟದಿದ್ದರೂ ಅವರ ಮುಂದಾಲೋಚನೆ ಪ್ರೇರಣಾ ಶಕ್ತಿಯಾಗಿ ಉಳಿದಿದೆ ಎಂದು ನುಡಿದರು.
ಮಧ್ಯಾಹ್ನ ಆರಂಭವಾದ ಕಾರ್ಯಕ್ರಮ: ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ೧೧.೩೦ಕ್ಕೆ ನಿಗದಿಯಾಗಿದ್ದರೂ ೧.೧೫ ಗಂಟೆಯಾದರೂ ಆರಂಭವಾಗಲಿಲ್ಲ. ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಸಾಕಷ್ಟು ಸಮಯದಿಂದ ಬಂದು ಕಾಯುತ್ತಿದ್ದರು. ಈ ವೇಳೆ ಶಾಸಕ ಜಿ.ಟಿ.ದೇವೇಗೌಡರು ಬಂದರು. ಅವರು ಕೂಡ ೧೫ ನಿಮಿಷ ಕುಳಿತರೂ ವೇದಿಕೆ ಕಾರ್ಯಕ್ರಮ ಆರಂಭವಾಗಲಿಲ್ಲ. ಈ ವೇಳೆ ಆಯೋಜಕರಿಗೆ ಬೇಗ ಕಾರ್ಯಕ್ರಮ ಶುರು ಮಾಡುವಂತೆ ಗದರಿದರು. ಜಿ.ಟಿ.ದೇವೇಗೌಡರು ಭಾಷಣ ಮುಗಿಸಿ ತಮ್ಮ ಆಸನದಲ್ಲಿ ಕೂರುತ್ತಿದ್ದಂತೆ ವ್ಯಕ್ತಿಯೊಬ್ಬರು ವೇದಿಕೆಯ ಬಳಿ ಬಂದು ಚುನಾವಣೆ ಕೋಟ್ಯಾಂತರ ರೂ. ಹಣ ಖರ್ಚು ಮಾಡುತ್ತೀರಾ. ಜಯಂತಿ ನೀವುಗಳೆಲ್ಲರೂ ಒಂದೊಂದು ಲಕ್ಷ ಹಣ ಕೊಟ್ರೆ ಏನಾಗುತ್ತೆ ಎಂದರು. ಗೌಡರು, ನಗುತ್ತಲೇ ಕೊಡೋಣ ಹೋಗು ಎಂದು ಪ್ರತಿಕ್ರಿಯಿಸಿದರು.