ಮೈಸೂರು: ನನ್ನನ್ನು ಅಪ್ರಬುದ್ಧ ಎಂದು ಟೀಕಿಸುವ ಸಿದ್ದರಾಮಯ್ಯ ಐದು ಗ್ಯಾರಂಟಿ ಯೋಜನೆಗಳಿಗೆ ಬೇಕಿರುವ ೫೯ ಸಾವಿರ ಕೋಟಿ ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂದು ರಾಜ್ಯದ ಜನತೆಗೆ ತಿಳಿಸಿ ತಮ್ಮ ಪ್ರಬುದ್ಧತೆ ಪ್ರದರ್ಶಿಸಲಿ ಎಂದು ಸಂಸದ ಪ್ರತಾಪಸಿಂಹ ಸವಾಲು ಹಾಕಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪಸಿಂಹ ಎಳಸು, ಅಪ್ರಬುದ್ಧ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನನ್ನು ಎಳಸು, ಅಪ್ರಬುದ್ಧ ಎಂದರೆ ನನಗೆ ಬೇಜಾರಿಲ್ಲ. ನೀವು ಮಹಾಮೇದಾವಿ, ಅರ್ಥಶಾಸ್ತ್ರಜ್ಞ. ನಿಮ್ಮ ಪ್ರಕಾರ ಪ್ರಬುದ್ಧತೆ ಎಂದರೆ ಏನು? ತಮ್ಮ ರಾಜಕೀಯ ಲಾಭಕ್ಕಾಗಿ ಸ್ವಪಕ್ಷೀಯರನ್ನೇ ಎತ್ತಿ ಕಟ್ಟಿ ಪರಮೇಶ್ವರ್ ಅವರನ್ನು ಸೋಲಿಸಿದ್ದಾ? ಮೊಮ್ಮಗನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿರುವುದಾ? ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರನ್ನು ಏಕವಚನದಲ್ಲಿ ಕರೆಯುವುದಾ? ಹಿರಿಯರನ್ನು ತ್ಯುಚ್ಛವಾಗಿ ಕಾಣುವುದಾ?, ಜನರನ್ನು ಗ್ಯಾರಂಟಿಗಳ ಹೆಸರಿನಲ್ಲಿ ದಾರಿ ತಪ್ಪಿಸುತ್ತಿರುವುದಾ? ಇದೇ ಪ್ರಬುದ್ಧತೆ ಎನ್ನುವುದಾದರೆ ಇಂತಹ ಪ್ರಬುದ್ಧತೆ ನನಗೆ ಬೇಡ. ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲದೆ ಗ್ಯಾರಂಟಿಗಳನ್ನು ಘೋಷಿಸಿ ವಿಲ ವಿಲ ಒದ್ದಾಡುತ್ತಿದ್ದಾರೆ. ನಿಮ್ಮ ಪ್ರಕಾರವೇ ಗ್ಯಾರಂಟಿಗಳ ಜಾರಿಗೆ ವರ್ಷಕ್ಕೆ ೫೯ ಸಾವಿರ ಕೋಟಿ ಬೇಕು. ಅದನ್ನು ಯಾವ ಮೂಲದಿಂದ ತರುತ್ತೀರಿ ಎಂಬುದನ್ನು ಜನರಿಗೆ ತಿಳಿಸಿ ಎಂದು ಟಾಂಗ್ ಕೊಟ್ಟರು.
ಉಪಕಾರ ಸ್ಮರಣೆ ಇಲ್ಲ: ಸಿದ್ದರಾಮಯ್ಯ ಅವರಿಗೆ ಉಪಕಾರ ಸ್ಮರಣೆ ಇಲ್ಲ. ಅವರನ್ನು ರಾಜಕಾರಣಕ್ಕೆ ಕರೆತಂದಿದ್ದು ಕೆಂಪೀರೇಗೌಡರು. ಅಧಿಕಾರ ಕೊಟ್ಟವರು ದೇವೇಗೌಡರು. ಆದರೂ ಅವರ ಹೆಸರನ್ನು ಸಿದ್ದರಾಮಯ್ಯ ಎಲ್ಲಿಯೂ ಹೇಳುವುದಿಲ್ಲ. ಈ ಬಾರಿಯ ಚುನಾವಣೆಯಲ್ಲಿ ವರುಣಾದಲ್ಲಿ ನೀವು ಯಾರಿಗೆ ಕರೆ ಮಾಡಿದಿರಿ? ನಟ ಸುದೀಪ್ ಪ್ರಚಾರಕ್ಕೆ ಬರದಂತೆ ಹೇಗೆ ತಡೆದಿರಿ? ನಿಮ್ಮ ವಿರುದ್ಧ ತೀಕ್ಷ್ಣ ಹೇಳಿಕೆ ನೀಡದಂತೆ ಹೇಗೆ ನೋಡಿಕೊಂಡಿರಿ ಎಂಬುದನ್ನಾದರೂ ಸ್ಮರಿಸಿಕೊಳ್ಳಿ. ನಂತರ ಬಿಜೆಪಿಯಲ್ಲಿ ನಿಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಯಾರು ಎನ್ನುವುದನ್ನು ಬಹಿರಂಗಪಡಿಸುತ್ತೇನೆ ಎಂದರು.
ಇತಿಹಾಸಕ್ಕೆ ದೋಖಾ: ಸಾವರ್ಕರ್ ಪಠ್ಯ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿ, ಜನತಾಪರಿವಾರದಿಂದ ರಾಜಕೀಯ ಆರಂಭಿಸಿದ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಕಾಂಗ್ರೆಸ್ ಬೈಯ್ಯುತ್ತಿದ್ದರು. ೨೦೦೬ರಿಂದ ಕಾಂಗ್ರೆಸ್‌ನಲ್ಲಿದ್ದಾರೆ. ಸಾವರ್ಕರ್ ಬ್ರಿಟೀಷರ ಬಳಿ ಕ್ಷಮೆ ಕೋರಿದ್ದರು ಎಂಬ ಕಾರಣಕ್ಕೆ ಅವರ ಪಠ್ಯ ಕೈಬಿಟ್ಟು, ನೆಹರು ಪಠ್ಯ ಹಾಕಿದ್ದಾರೆ. ನೂರು ವರ್ಷಗಳ ಹಿಂದೆ ನೆಹರೂ ಅವರನ್ನು ನಬಾ ಜೈಲಿಗೆ ಹಾಕಲಾಗಿತ್ತು. ನೆಹರು ಅವರು ಕ್ಷಮಾಪಣಾ ಪತ್ರ ಬರೆದುಕೊಟ್ಟು ಜೈಲಿನಿಂದ ಹೊರಬಂದಿದ್ದರು. ಆದರೆ, ಸಾವರ್ಕರ್ ಎರಡೆರಡು ಬಾರಿ ಜೀವಾವಧಿ ಶಿಕ್ಷೆ ಅನುಭವಿಸಿದ್ದರು. ಅಂತಹವರ ಪಠ್ಯ ಕೈಬಿಟ್ಟಿರುವುದು ಇತಿಹಾಸಕ್ಕೆ ಮಾಡುತ್ತಿರುವ ದೋಖಾ. ಗ್ಯಾರಂಟಿ ವಿಚಾರದಲೂ ಇದೇ ರೀತಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಧಿಕಾರಕ್ಕೆ ತರುವ ಛಲವಿರಲಿಲ್ಲ: ಬಿಜೆಪಿ ಕಾರ್ಯಕತರಾದ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಯಡಿಯೂರಪ್ಪ ಅವರಿಂದ ಅಧಿಕಾರ ವಹಿಸಿಕೊಂಡ ಅತಿರಥ ಮಹಾರಥರು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಿಲ್ಲ. ಅಧಿಕಾರಕ್ಕೆ ತರಲು ಛಲವೂ ಅವರಲ್ಲಿರಲಿಲ್ಲ. ಈ ನೋವು ಕಾರ್ಯಕರ್ತರಲ್ಲಿತ್ತು. ಕಾರ್ಯಕರ್ತರ ಮನಸ್ಸಿನ ನೋವನ್ನು ನಾನು ಹೇಳಿದ್ದೇನೆ. ನನಗೆ ಯಾವ ಅಧಿಕಾರದ ಆಸೆಯೂ ಇಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಅವರಿಗೇ ಟಾಂಗ್ ಕೊಟ್ಟರು.
ಕೆಲವರಿಗೆ ಧೈರ್ಯ ಬಂದಿದೆ: ಕಲಬುರಗಿಯಲ್ಲಿ ಅಕ್ರಮ ಮರಳು ದಂಧೆಕೋರರು ಹೆಡ್ ಕಾನ್ಸ್‌ಟೇಬಲ್ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಕೊಲೆಯಾಯಿತು. ಐಎಎಸ್ ಅಧಿಕಾರಿ ಡಿ.ಕೆ.ರವಿ, ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡರು. ರಶ್ಮಿ ಮಹೇಶ್, ಸಿಖಾ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ಸರಣಿ ದಾಳಿ ನಡೆದವು. ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿರುವುದರಿಂದ ಕೆಲವರಿಗೆ ಧೈರ್ಯ ಬಂದಿವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತವೆ ಎಂದರು.
ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್ ಪ್ರತಾಪಸಿಂಹ ಹೆಗಲ ಮೇಲೆ ಬಂದೂಕಿಟ್ಟು ಹಾರಿಸಿರುವ ಗುಂಡು ಬೊಮ್ಮಾಯಿ ಎದೆಗೆ ತಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳನ್ನು ಡಿಸೈನ್ ಮಾಡಿಸಿದ್ದು ಡಿ.ಕೆ.ಶಿವಕುಮಾರ್. ಸಹಜವಾಗಿಯೇ ಅವರಿಗೆ ಸಿಎಂ ಆಗಬೇಕೆಂಬ ಆಸೆಯಿರುತ್ತದೆ. ಸಿದ್ದರಾಮಯ್ಯ ಅವರಿಗೆ ೨ ವರ್ಷ ಅಧಿಕಾರ ಹಂಚಿಕೆಯಾಗಿದ್ದರೂ ೫ ವರ್ಷ ನಾನೇ ಸಿಎಂ ಎಂದು ಎಂ.ಬಿ.ಪಾಟೀಲ್ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದ್ದಾರೆ. ಅಧಿಕಾರ ಹಂಚಿಕೆಯೇ ಆಗಿಲ್ಲದಿದ್ದರೆ ಬಹಿರಂಗವಾಗಿ ಹೇಳಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಮಹೇಶ್‌ರಾಜೇ ಅರಸ್, ಗಿರಿಧರ್ ಸೇರಿದಂತೆ ಹಲವರುಇದ್ದರು.
೯ ವರ್ಷಗಳ ಸಾಧನೆಯ ಪ್ರಚಾರ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ೯ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳು ಈ ಅಭಿಯಾನ ನಡೆಯಲಿದೆ. ಜೂ.೨೨ರಂದು ಮೈಸೂರು ವಿಭಾಗದ ಕಾರ್ಯಕರ್ತರ ಸಭೆ ನಡೆಯಲಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಜಲಜೀವನ್ ಮಿಷನ್, ದಶಪಥ ಹೆದ್ದಾರಿ ನಿರ್ಮಾಣ, ಮಂಡಕಳ್ಳಿ ವಿಮಾನ ನಿಲ್ದಾಣ, ರೈಲು ನಿಲ್ದಾಣದ ಅಭಿವೃದ್ಧಿ, ಸುಯೇಜ್ ಫಾರಂ ಕಸವಿಲೇವಾರಿಗೆ ಕ್ರಮ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಮೋದಿ ಅವರು ಮೈಸೂರಿಗೆ ಕೊಟ್ಟಿದ್ದಾರೆ. ಪೆರಿಪರಲ್ ರಿಂಗ್ ರಸ್ತೆ ಡಿಪಿಆರ್ ಆದ ನಂತರ ಕಾರ್ಯಾರಂಭವಾಗಲಿದೆ. ನಂಜನಗೂಡು ೬ ಪಥದ ರಸ್ತೆ ನಿರ್ಮಾಣ ಮಾಡುತ್ತೇವೆ. ಗ್ರೇಟರ್ ಮೈಸೂರು ಮಾಡಿ ಮೋನೋ, ಮೆಟ್ರೋ ರೈಲು ತರುವ ಕೆಲಸ ಮಾಡುತ್ತೇವೆ. ಸರ್ಕಾರದ ಈ ಎಲ್ಲಾ ಜನಪರ ಯೋಜನೆಗಳ ಅರಿವು ಮೂಡಿಸುವ ಕೆಲಸವನ್ನು ಅಭಿಯಾನದಲ್ಲಿ ಮಾಡುತ್ತೇವೆ. ೨೦೨೪ರಲ್ಲೂ ಸರ್ಕಾರದ ಅಭಿವೃದ್ಧಿ ನೋಡಿ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಸಂಸದ ಪ್ರತಾಪಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಸಾತಗಳ್ಳಿ ಬಳಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ೧೯ ಎಕರೆ ಜಾಗ ಗುರುತಿಸಲಾಗಿತ್ತು. ಆದರೆ ಮಧ್ಯದಲ್ಲೇ ಎರಡು ಎರಕೆ ಕೆರೆ ಬರುತ್ತಿದೆ. ಇದರಿಂದಾಗಿ ಅಲ್ಲಿ ಕ್ರೀಡಾಂಗಣ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಬೋಗಾದಿ ಬಳಿಯ ಹುಯಿಲಾಳುವಿನಲ್ಲಿ ೨೬ ಎಕರೆ ಜಾಗ ಗುರುತಿಸಿದ್ದು, ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲಾಗುವುದು.
-ಪ್ರತಾಪಸಿಂಹ, ಸಂಸದ