ಮೈಸೂರು: ಮುಂದಿನ ಒಂದು ವರ್ಷದೊಳಗೆ ಹತ್ತು ಲಕ್ಷ ಯುವಕ ಯುವತಿಯರಿಗೆ ಸರ್ಕಾರಿ ಉದ್ಯೋಗ ಕಲ್ಪಿಸುವ ಜತೆಗೆ ಸರ್ಕಾರಿ ಸ್ವಾಮ್ಯದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಕೇಂದ್ರ ಕೃಷಿ ಸಂಸ್ಕರಣೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮಾನಸಗಂಗೋತ್ರಿಯ ಆಯುಷ್‌ನಲ್ಲಿರುವ ನಾಲೆಡ್ಜ್ ಪಾರ್ಕ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರೋಜ್ಗಾರ್ ಮೇಳ ಸವಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ, ನುಡಿದಂತೆ ನಡೆಯುವವರು. ಶಿಲಾನ್ಯಾಸ ಮಾಡಿದ ಮೇಲೆ ಅದನ್ನು ಅವರೇ ಉದ್ಘಾಟನೆ ಮಾಡುತ್ತಿದ್ದಾರೆ. ಯಾವುದೇ ಯೋಜನೆಗಳಿಗೆ ಗತಿಶಕ್ತಿ, ವೇಗ ಕೊಡುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ಅದನ್ನು ತುಂಬುವ ಕೆಲಸ ಮಾಡದೆ ಇರುವುದರಿಂದ ಹೊಸ ಉದ್ಯೋಗ ಕೊಡಲು ಸಾಧ್ಯವಿಲ್ಲ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಆಗುವುದಿಲ್ಲವೆಂದು ಪ್ರತಿ ಇಲಾಖೆಯಲ್ಲೂ ನೇಮಕಾತಿ ಮಾಡಲು ಮುಂದಾಗಿದ್ದಾರೆ ಎಂದು ನುಡಿದರು.
ಕೇಂದ್ರಕ್ಕೆ ಸಂಬಂಧಿಸಿದ ಇಲಾಖೆಗಳಲ್ಲಿ ೩.೫೯ ಲಕ್ಷ ಉದ್ಯೋಗ ಭರ್ತಿ ಮಾಡಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರಗಳಿಗೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಲಾಗಿದೆ. ಯುವಕ, ಯುವತಿಯರಿಗೆ ಹತ್ತು ಲಕ್ಷ ಸರ್ಕಾರಿ ಉದ್ಯೋಗ ಕೊಡುವ ಜತೆಗೆ ಒಂದು ಲಕ್ಷಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸುವ ಮೂಲಕ ಕನಿಷ್ಠ ಹತ್ತರಿಂದ ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲು ಉತ್ತೇಜನ ನೀಡಲಾಗುತ್ತದೆ ಎಂದರು.
ಸ್ಕಿಲ್ ಡೆವಲಪ್‌ಮೆಂಟ್ ಕಾರ್ಯಕ್ರಮದ ನೆರವಿನಿಂದ ಅನೇಕ ತರಬೇತಿ ನೀಡಿ ಸ್ವಂತ ಉದ್ಯಮ ಸ್ಥಾಪಿಸುವವರಿಗೆ ಸರ್ಕಾರದ ಸಬ್ಸಿಡಿ, ಸಾಲ ಸೌಲಭ್ಯ, ಸಣ್ಣ ಸಣ್ಣ ಕೈಗಾರಿಕೆ ತೆರೆಯುವವರಿಗೆ ಮಾರುಕಟ್ಟೆ ಸೇರಿದಂತೆ ಇನ್ನಿತರ ಮೂಲ ಸೌಲಭ್ಯ ಒದಗಿಸುತ್ತಿದೆ ಎಂದು ವಿವರಿಸಿದರು.
೭೨ ವರ್ಷ ಪೂರೈಸಿರುವ ಪ್ರಧಾನಿಯವರು ದಿನದ ೧೮ ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ಹಲವಾರು ದೇಶಗಳಲ್ಲಿ ಪ್ರವಾಸ ಮಾಡಿರುವ ಅವರು ಒಂದು ದಿನವೂ ಜ್ವರ, ಆಯಾಸವೆಂದು ಮಲಗಿರುವುದನ್ನು ನೋಡಿಯೇ ಇಲ್ಲ. ದೇಶದ ಅಭಿವೃದ್ಧಿಗೆ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಅಮೃತಕಾಲ: ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷಗಳಾಗುವ ಹೊತ್ತಿಗೆ ಭಾರತ ಹೇಗಿರಬೇಕು, ಯಾವ ರೀತಿ ಪ್ರಗತಿ ಕಾಣಬೇಕೆಂಬ ದೂರದೃಷ್ಟಿ ಹೊಂದಿ ಯೋಜನೆಗಳನ್ನು ರೂಪಿಸಿದ್ದಾರೆ. ಪ್ರಧಾನಿಗಳು ಯಾವುದೇ ಸಚಿವರ ಜತೆಗೆ ಮಾತನಾಡಿದಾಗ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸುತ್ತಾರೆಯೇ ಹೊರತು ಚುನಾವಣೆ ಕುರಿತು ಮಾತನಾಡಲ್ಲ. ಇಲಾಖೆಗಳು ಯಾವ ರೀತಿ ಕೆಲಸ ಮಾಡಬೇಕು, ಯಾವ ಹಂತದಲ್ಲಿ ಗುರಿ ತಲುಪಬೇಕು ಎಂಬ ಚರ್ಚೆ ಮಾಡುತ್ತಾರೆ. ಹೀಗಾಗಿಯೇ ಸರ್ಕಾರಿ ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು ಕೇಂದ್ರ ಗಮನಹರಿಸಿದೆ ಎಂದು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮೇಯರ್ ಶಿವಕುಮಾರ್, ಆಯುಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ, ಡಿಎಫ್‌ಎಸ್ ನಿರ್ದೇಶಕ ಸಂಜಯಕುಮಾರ್, ರೈಲ್ವೆ ಡಿಆರ್‌ಎಂ ಶಿಲ್ಪಿ ಅಗರ್ವಾಲ್ ಹಾಜರಿದ್ದರು.