
ಮೈಸೂರು: ಕೃಷಿ ಪರಿಕರ ಮಾರಾಟಗಾರರು ರೈತಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಮತ್ತು ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೇ ಲೈಸನ್ಸ್ ರದ್ದು ಮಾಡಲಾಗುವುದೆಂದು ಸಹಾಯಕ ಕೃಷಿ ನಿರ್ದೇಶಕಿ ಡಾ.ಹೆಚ್.ಬಿ.ಮಧುಲತಾ ಎಚ್ಚರಿಕೆ ನೀಡಿದರು.
ಕರ್ಜನ್ ಪಾರ್ಕ್‌ನಲ್ಲಿರುವ ಡಾ.ಎಂ.ಹೆಚ್.ಮರೀಗೌಡ ಸಭಾ ಭವನದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮೈಸೂರು ತಾಲೂಕಿನ ಎಲ್ಲಾ ರಸಗೊಬ್ಬರ ಹಾಗೂ ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟಗಾರರು ಹಾಗೂ ತಾಲೂಕಿನ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮಲ್ಲಿ ದಾಸ್ತಾನಿರುವ ರಸಗೊಬ್ಬರ ಹಾಗೂ ಬಿತ್ತನೆ ಬೀಜ, ಕೀಟನಾಶಕಗಳ ಪ್ರಮಾಣ ಮಾರಾಟ ದರ ಮತ್ತು ಮಾರಾಟಗಾರರ ಲೈಸನ್ಸ್‌ಗಳನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಪ್ರದರ್ಶಿಸಬೇಕು. ಕಡ್ಡಾಯವಾಗಿ ರೈತರಿಗೆ ಬಿಲ್ ನೀಡಬೇಕೆಂದು ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ನಕಲಿ ರಸಗೊಬ್ಬರಗಳ ಹಾವಳಿ ವರದಿಯಾಗುತ್ತಿರುವುದರಿಂದ ಎಲ್ಲಾ ರೈತರು ಎಚ್ಚರ ವಹಿಸಿ, ತಾವು ಪಾವತಿಸುವ ಹಣಕ್ಕೆ ಬಿಲ್ ಕೇಳಿ ಪಡೆಯಬೇಕು. ರಸಗೊಬ್ಬರದ ಚೀಲದ ಬಾಯಿಯನ್ನು ಯಂತ್ರದಿಂದ ಹೊಲೆದಿರಬೇಕು. ಕೈಯಿಂದ ಚೀಲ ಹೊಲೆದಿದ್ದರೆ ಅದಕ್ಕೆ ಸೀಸದ ಮೊಹರನ್ನು ಖಚಿತವಾಗಿ ಹಾಕಿರಬೇಕು. ರಸಗೊಬ್ಬರ ಖರೀದಿಸಿದಾಗ, ಖರೀದಿಸಿದ ಚೀಲಗಳನ್ನು ತೂಕ ಮಾಡಿ, ಖಾತ್ರಿ ಪಡಿಸಿಕೊಳ್ಳಬೇಕು. ರಸಗೊಬ್ಬರದ ಚೀಲದ ಮೇಲೆ ರಸಗೊಬ್ಬರವೆಂದು ಮುದ್ರಿತವಾಗಿರಬೇಕು. ತಯಾರಕರ ಹೆಸರು ಮತ್ತು ವಿಳಾಸ ರಸಗೊಬ್ಬರದ ಚೀಲದ ಮೇಲೆ ಮುದ್ರಿತವಾಗಿರಬೇಕು. ರಸಗೊಬ್ಬರದ ಹೆಸರು ಮತ್ತು ಬ್ರಾಂಡ್ ನಮೂದಿಸಿರಬೇಕು. ರಸಗೊಬ್ಬರದಲ್ಲಿರುವ ಕನಿಷ್ಠ ಶೇಕಡಾವಾರು ಪೋಷಕಾಂಶಗಳ ವಿವರವಿರಬೇಕು. ಗರಿಷ್ಠ ಮಾರಾಟ ಬೆಲೆ ಇರಬೇಕು. ಗರಿಷ್ಠ ಮತ್ತು ನಿವ್ವಳ ತೂಕವಿರಬೇಕು. ರಸಗೊಬ್ಬರಗಳ ಮಿಶ್ರಣಗಳು, ಸಿಂಗಲ್ ಸೂಪರ್ ಪಾಸ್ಪೇಟ್, ಲಘು ಪೋಷಕಾಂಶಗಳು ಮತ್ತು ಅವುಗಳ ಮಿಶ್ರಣಗಳ ಚೀಲ ಅಥವಾ ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ ಮತ್ತು ನೊಂದಣಿ ಸಂಖ್ಯೆ ನಮೂದಿಸಿರಬೇಕು ಎಂದರು.
ರಸಗೊಬ್ಬರವನ್ನು ಖರೀದಿಸಿದ್ದಕ್ಕೆ ನಮೂನೆ ಎಂ ನಲ್ಲಿ ರಶೀದಿ ಪಡೆಯಬೇಕು. ಖರೀದಿಸಿದ ರಶೀದಿಯಲ್ಲಿ ರಸಗೊಬ್ಬರಗಳ ವಿವರಗಳನ್ನು ತುಂಬಿದ್ದೂ, ರೈತರ ಸಹಿ ಮತ್ತು ಮಾರಾಟಗಾರರ ಸಹಿ ಕಡ್ಡಾಯವಾಗಿರಬೇಕು. ಆಧಾರ್ ಆಧಾರಿತ ಪಿಓಎಸ್ ಯಂತ್ರಗಳ ಮೂಲಕ ಕಡ್ಡಾಯವಾಗಿ ಹೆಬ್ಬೆಟ್ಟು ಪಡೆದು, ಬಿಲ್ ನೀಡಬೇಕು.ಈ ಎಲ್ಲಾ ಅಂಶಗಳನ್ನು ರೈತರು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ಮತ್ತು ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಟಗಾರರೊಂದಿಗೆ ವ್ಯವಹರಿಸಬೇಕು ಎಂದು ರೈತರಲ್ಲಿ ಕೃಷಿ ಅಧಿಕಾರಿಗಳು ಮನವಿ ಮಾಡಿರುತ್ತಾರೆ. ಇದಲ್ಲದೇ ಯಾವ ಡೀಲರ್‌ಗಳು ರೈತರೊಂದಿಗೆ ಅನುಚಿತವಾಗಿ ವರ್ತಿಸುವುದು ಅಥವಾ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು, ಮೇಲ್ಕಂಡ ನಿಯಮಗಳನ್ನು ಮೀರಿ ನಡೆದುಕೊಳ್ಳುವುದು ಕಂಡುಬಂದಲ್ಲಿ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿದರು.
ತಾಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ಸಹಾಯ ಧನದಲ್ಲಿ ಬಿತ್ತನೆ ಬೀಜಗಳಾದ ಮುಸುಕಿನ ಜೋಳ, ಹೆಸರು, ಉದ್ದು, ಅಲಸಂದೆ ಲಭ್ಯವಿದ್ದು, ರೈತರು ಈ ಸೌಲಭ್ಯಗಳನ್ನು ಪಡೆಯಲು ತಮ್ಮ ಆಧಾರ್ ಸಂಖ್ಯೆ ಅಥವಾ ಎಫ್‌ಐಡಿ ಸಂಖ್ಯೆಯನ್ನು ಮತ್ತು ಪರಿಶಿಷ್ಠ ಜಾತಿ, ಪಂಗಡ ವರ್ಗದ ರೈತರು ಜಾತಿ ಪ್ರಮಾಣ ಪತ್ರ ಪ್ರತಿಗಳನ್ನು ಒದಗಿಸುವಂತೆ ಸೂಚಿಸಿದರು.
ಸಬೆಯಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಲಿಂಗರಾಜು, ರೈತ ಮುಖಂಡರಾದ ವರಕೂಡು ಕೃಷ್ಣೇಗೌಡ, ವೆಂಕಟೇಶ್, ವಿಜಯೇಂದ್ರ, ಕಂದಾಯ ಇಲಾಖೆಯ ಶಿರಸ್ತೇದಾರ್ ಲೋಕೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್, ಕೃಷಿ ಅಧಿಕಾರಿಗಳಾದ ಪಿ.ಎನ್.ವೆಂಕಟೇಶ, ಆನಂದ ಕುಮಾರ್, ಪಿ.ಎನ್.ಜೀವನ್, ಸಿ.ಎಂ.ಕಾರ್ತಿಕ್ ಮತ್ತು ಸಿಬ್ಬಂದಿಗಳು ಹಾಜರಿದ್ದರು.