Saturday, April 12, 2025
Google search engine

Homeಸ್ಥಳೀಯಹೆದ್ದಾರಿಯಲ್ಲಿ ಕೆಟ್ಟು ನಿಂತ ೩೦ಕ್ಕೂ ಅಧಿಕ ದೀಪಗಳು.!

ಹೆದ್ದಾರಿಯಲ್ಲಿ ಕೆಟ್ಟು ನಿಂತ ೩೦ಕ್ಕೂ ಅಧಿಕ ದೀಪಗಳು.!

ಗುಂಡ್ಲುಪೇಟೆ: ರಾಷ್ಟ್ರೀಯ ಹೆದ್ಧಾರಿ-೭೬೬ರ ಪಟ್ಟಣ ವ್ಯಾಪ್ತಿಯಲ್ಲಿ ಅಳವಡಿಕೆ ಮಾಡಿರುವ ಸುಮಾರು ೩೦ಕ್ಕೂ ಅಧಿಕ ವಿದ್ಯುತ್ ಕಂಬಗಳಲ್ಲಿ ಬೀದಿ ದೀಪಗಳು ನಿರ್ವಹಣೆ ಕೊರತೆಯಿಂದ ಕಡೆಕೆಟ್ಟು ನಿಂತಿದೆ. ಇದರಿಂದ ರಾತ್ರಿ ವೇಳೆ ಸಂಚಾರ ಮಾಡುವವರು ಕತ್ತಲಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಕೂಡ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಪುರಸಭೆ ಅಧಿಕಾರಿಗಳು ದುರಸ್ತಿ ಪಡಿಸುವ ಗೋಜಿಗೆ ಹೋಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ರಾಷ್ಟ್ರೀಯ ಹೆದ್ಧಾರಿ-೭೬೬ರ ಪಟ್ಟಣ ವ್ಯಾಪ್ತಿಯಲ್ಲಿ ಸುಮಾರು ೮೦ಕ್ಕೂ ಅಧಿಕ ವಿದ್ಯುತ್ ಕಂಬಗಳಿವೆ. ಗುಂಡ್ಲುಪೇಟೆಯು ತಮಿಳುನಾಡು ಹಾಗೂ ಕೇರಳ ಗಡಿ ಹಂಚಿಕೊಂಡಿರುವ ಹಿನ್ನೆಲೆ ಪ್ರತಿನಿತ್ಯ ಸಾವಿರಾರು ವಾಹನಗಳು ಪಟ್ಟಣ ಮಾರ್ಗವಾಗಿ ರಾತ್ರಿ ವೇಳೆ ಸಂಚಾರ ಮಾಡುತ್ತಿವೆ. ಜೊತೆಗೆ ತಾಲೂಕಿನ ವಿವಿಧ ಗ್ರಾಮದ ಜನರ ಓಡಾಟವು ಹೆಚ್ಚಿದೆ. ವಾರಾಂತ್ಯದಲ್ಲಿ ಬಂಡೀಪುರ ಸಫಾರಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತಮಿಳುನಾಡಿನ ಊಟಿ, ಕೇರಳದ ವೈನಾಡಿಗೆ ಅಧಿಕ ಸಂಖ್ಯೆಯಲ್ಲಿ ತೆರಳುತ್ತಾರೆ. ಹೀಗಿದ್ದರೂ ಸಹ ಹೆದ್ದಾರಿ ನಿರ್ವಹಣೆ ಪ್ರಾಧಿಕಾರದ ಅಧಿಕಾರಿಗಳು, ತಾಲೂಕು ಆಡಳಿತ ಹಾಗೂ ಪುರಸಭೆ ಆಡಳಿತ ವರ್ಗ ಕಣ್ಮುಚ್ಚಿ ಕುಳಿತಿದೆ ಎಂದು ವಾಹನ ಸವಾರ ದೇವರಾಜು ಆಕ್ರೋಶ ಹೊರಹಾಕಿದರು.

ಪುರಸಭೆ ಬಜೆಟ್‌ನಲ್ಲಿ ಅನುದಾನ ಮೀಸಲು: ಪಟ್ಟಣ ವ್ಯಾಪ್ತಿಯ ಬೀದಿ ದೀಪಗಳ ನಿರ್ವಹಣೆ ಜೊತೆಗೆ ರಾಷ್ಟ್ರೀಯ ಹೆದ್ದಾರಿ ದೀಪಗಳ ದುರಸ್ತಿಗೆ ಪುರಸಭೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ. ಆದರೆ ಕೆಟ್ಟು ನಿಂತ ಬೀದಿ ದೀಪಗಳ ದುರಸ್ತಿಗೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ದುರಸ್ತಿಗೊಂಡ ತಿಂಗಳೊಳಗೆ ಮತ್ತೇ ರಿಪೇರಿ: ರಾಷ್ಟ್ರೀಯ ಹೆದ್ದಾರಿ-೭೬೬ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಮಧ್ಯೆ ಅಳವಡಿಕೆ ಮಾಡಿರುವ ವಿದ್ಯುತ್ ಕಂಬಕ್ಕೆ ಗುತ್ತಿಗೆದಾರ ಅಥವಾ ಇಂಜಿನಿಯರ್ ಸಮರ್ಪಕವಾಗಿ ವೈರ್‍ಗಳನ್ನು ಅಳವಡಿಕೆ ಮಾಡದ ಹಿನ್ನೆಲೆ ಹೆದ್ದಾರಿ ಬೀದಿ ದೀಪಗಳನ್ನು ಸರಿಪಡಿಸಿದ ತಿಂಗಳೊಳಗೆ ಮತ್ತೆ ಕೆಟ್ಟು ನಿಲ್ಲುತ್ತಿದೆ. ಪದೇ ಪದೇ ಈ ಸಮಸ್ಯೆ ಮರುಕಳಿಸುತ್ತಿದ್ದರೂ ಸಹ ಅಧಿಕಾರಿಗಳು ಶಾಶ್ವತ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ.

ಚಾಮರಾಜನಗರ ರಸ್ತೆಯಲ್ಲೂ ಇದೇ ಗೋಳು: ಪಟ್ಟಣದ ಚಾಮರಾಜನಗರ-ಗುಂಡ್ಲುಪೇಟೆ ರಾಜ್ಯ ಹೆದ್ದಾರಿಯಲ್ಲಿ ೩೨ ವಿದ್ಯುತ್ ಕಂಬಗಳಿದ್ದು, ಇದರಲ್ಲಿ ೧೭ ಕಂಬದಲ್ಲಿ ವಿದ್ಯುತ್ ದೀಪ ಸಂಪೂರ್ಣವಾಗಿ ಕೆಟ್ಟು ನಿಂತಿವೆ. ೫ ಕಂಬದಲ್ಲಿ ಡಬಲ್ ಲೈಟ್ ಮತ್ತು ೧೦ ಕಂಬದಲ್ಲಿ ಕೇವಲ ಒಂದು ಲೈಟ್ ಮಾತ್ರ ಚಾಲ್ತಿಯಲ್ಲಿದೆ. ಆದ್ದರಿಂದ ಎಲ್ಲಾ ಬೀದಿ ದೀಪಗಳನ್ನು ದುರಸ್ತಿ ಪಡಿಸಿ ಜನರ ಬಳಕೆಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ನೂತನ ಶಾಸಕರೇ ಇತ್ತ ಗಮನ ಹರಿಸಿ: ರಾಷ್ಟ್ರೀಯ ಹೆದ್ಧಾರಿ-೭೬೬ರ ಪಟ್ಟಣ ವ್ಯಾಪ್ತಿಯಲ್ಲಿರುವ ವಿದ್ಯುತ್ ಕಂಬಗಳ ಬೀದಿ ದೀಪದ ಸಮಸ್ಯೆ ಹಲವು ವರ್ಷಗಳಿಂದಲೂ ಇದೆ. ಹಲವು ಮಂದಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಂದು ಹೋದರೂ ಸಹ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular