ಬೆಂಗಳೂರು : ಬೆಂಗಳೂರು ನಗರಾಭಿವೃದ್ಧಿಗಾಗಿ ಸುಮಾರು 1.35 ಲಕ್ಷ ಕೋಟಿ ರು. ವೆಚ್ಚದಲ್ಲಿ ಡಬಲ್ ಡೆಕ್ಕರ್ ರಸ್ತೆಗಳು, ಸುರಂಗ ರಸ್ತೆಗಳು, ಬ್ಯುಸಿನೆಸ್ ಕಾರಿಡಾರ್, ವೈಟ್ ಟ್ಯಾಪಿಂಗ್ ರಸ್ತೆಗಳು, ಡಾಂಬರು ರಸ್ತೆಗಳು, 6ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ ಸೇರಿ ಹಲವು ಯೋಜನೆ ರೂಪಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರ್ಕಾರ ಮೂಲಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಬೆಂಗಳೂರಿನಲ್ಲಿ ಹೊಸ ಮೆಟ್ರೋ ರೈಲು ಮಾರ್ಗಗಳ ನಿರ್ಮಾಣ, ಬಫರ್ ರಸ್ತೆ, ಮೇಲ್ಸೇತುವೆ, ಉತ್ತರ-ದಕ್ಷಿಣ ಕಾರಿಡಾರ್, ಪೂರ್ವ-ಪಶ್ಚಿಮ ಕಾರಿಡಾರ್, ಉದ್ಯಾನಗಳ ಅಭಿವೃದ್ಧಿ, ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ, ಶಿಕ್ಷಣ-ಆರೋಗ್ಯ ವ್ಯವಸ್ಥೆಯ ಸುಧಾರಣೆ, ಟ್ರಾಫಿಕ್ ನಿರ್ವಹಣೆ ಆಗಲಿದೆ ಎಂದರು.
ಇದೇ ವೇಳೆ ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ನಗರಗಳ ಅಭಿವೃದ್ಧಿ 16,508 ಕೋಟಿ ರು. ಅನುದಾನ ನೀಡಲಾಗಿದೆ. 10 ಮಹಾನಗರ ಪಾಲಿಕೆಗೆ 2 ಸಾವಿರ ಕೋಟಿ ರು. ಅನುದಾನ ನೀಡಿ 2ನೇ ಹಂತದ ಮಹತ್ಮಾಗಾಂಧಿ ನಗರ ವಿಕಾಸ ಯೋಜನೆಯನ್ನು 3 ವರ್ಷದಲ್ಲಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.