ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ 2024ನೇ ಸಾಲಿನ ಹೊಸ ವರ್ಷವನ್ನು ಆಚರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಎಲ್ಲರಿಗೂ ಶುಭಾಶಯ ಕೋರಿದರು. ಮೃತರ ಅವಲಂಬಿತರಿಗೆ ಒಂದು ಕೋಟಿ ಮೊತ್ತದ ಪರಿಹಾರ ವಿತರಿಸಿದರು.
ಶಾಂತಿನಗರದಲ್ಲಿರುವ ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ಅಪಘಾತದಲ್ಲಿ ಮೃತರಾಗಿದ್ದ 03 ಸಿಬ್ಬಂದಿಗಳ ಅವಲಂಭಿತ ಕುಟುಂಬವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗೌರವಿಸಿದರು. ಸೀರೆ ಮತ್ತು ಸಿಹಿಯನ್ನು ನೀಡಿ ಕುಟುಂಬ ಸದಸ್ಯರ ಅಗಲಿಕೆಯ ದುಃಖದ ನಡುವೆ ಮುಂದಿನ ಜೀವನ ಸಾಗಿಸುವಂತೆ ಧೈರ್ಯ ತುಂಬಲಾಯಿತು. ನಂತರ ತಲಾ ರೂ.1 ಕೋಟಿಯಂತೆ ಅಪಘಾತ ಪರಿಹಾರ ಮೊತ್ತವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮೃತ ಅವಲಂಬಿತರ ಕುಟುಂಬದವರಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ತಮ್ಮವರನ್ನು ಕಳೆದುಕೊಂಡ ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಮಾಡಿಕೊಂಡು ಯಾರನ್ನೂ ಅವಲಂಬಿಸದೆ ಬದುಕು ನಡೆಸಬಹುದಾಗಿದೆ ಎಂದರು.
ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇ ರೀತಿ, ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪನಿಯೊಂದಿಗೆ ರೂ.50 ಲಕ್ಷ ಹಾಗೂ SBIನ Corporate Salary Package ಅಡಿಯಲ್ಲಿ ರೂ.50 ಲಕ್ಷ ನೀಡಲಾಗುತ್ತಿದೆ.
ಈ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕ.ರಾ.ರ.ಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು. ನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ. ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
ಈವರೆಗೆ 09 ಜನ ನೌಕರರ ಕುಟುಂಬದವರಿಗೆ ತಲಾ ರೂ. 1 ಕೋಟಿಗಳ ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ. ಇಂದು 3ಜನ ನೌಕರರ ಅವಲಂಬಿತರಿಗೆ ರೂ.1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಯಿತು.