ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ವೆನ್ಲಾಕ್‌ನಲ್ಲಿ ಅಗತ್ಯ ಹೊಸ ಕಟ್ಟಡಗಳೊಂದಿಗೆ ಅಂದಾಜು 10 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಜನವರಿಯೊಳಗೆ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಲೇಡಿಗೋಶನ್ ಆಸ್ಪತ್ರೆಯ ವಿನೂತನ ಸೌಲಭ್ಯಗಳನ್ನು ವೀಕ್ಷಿಸಿದ ಬಳಿಕ ವೆನ್‌ಲಾಕ್ ಆಸ್ಪತ್ರೆ ಸೇರಿದಂತೆ ಪ್ರಗತಿ ಪರಿಶೀಲನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವೆನ್‌ಲಾಕ್ ಆಸ್ಪತ್ರೆಯ ಶವಾಗಾರ ಕಟ್ಟಡ, ಪ್ಯಾರಾ ಮೆಡಿಕಲ್ ಕಾಲೇಜು ಕಟ್ಟಡ, ಪೋಸ್ಟ್ ಮಾರ್ಟಂ ಕೊಠಡಿ ನಿರ್ಮಾಣ, ಅಡುಗೆ ಕೋಣೆ ನಿರ್ಮಾಣ, ಎರಡು ಕಟ್ಟಡಗಳನ್ನು ಸಂಪರ್ಕಿಸುವ ಸೇತುವೆಯ ಪುನರ್ ನಿರ್ಮಾಣ ಸೇರಿದಂತೆ ಅಂದಾಜು ಮೂಲ ಕಾಮಗಾರಿಗಳಿಗೆ ವಿವಿಧ ಸಂಸ್ಥೆಗಳ ಸಿಎಸ್‌ಆರ್ ಫಂಡ್‌ನಿಂದ ಪಡೆಯುವ ಜತೆಗೆ ಇಲಾಖೆಯಿಂದಲೂ ಅನುದಾನ ಒದಗಿಸಿ ಕ್ರಮ ವಹಿಸಲಾಗುವುದು. ಮುಂದಿನ ವಾರ ಅಧಿಕಾರಿಗಳು ಬೆಂಗಳೂರಿನಲ್ಲಿ ಮಾಹಿತಿಯನ್ನು ನೀಡಿದರೆ ಯಾವ ಹಂತದಲ್ಲಿ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಎಂಬುದನ್ನು ನಿರ್ಧರಿಸಲಾಗುವುದು. ಲೇಡಿಗೋಶನ್ ಸೌಲಭ್ಯಗಳು ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತಿದೆ ಎಂದವರು ಹೇಳಿದರು.