ಬೆಂಗಳೂರು: ಬೆಂಗಳೂರು ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ತಲಾ 10 ಕೋಟಿ ರೂ. ಮಂಜೂರು ಮಾಡಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಇತ್ತೀಚೆಗೆ ಹೊರಡಿಸಿರುವ ಆದೇಶ ಇದೀಗ ವಿವಾದಕ್ಕೆ ಗ್ರಾಸವಾಗಿದೆ. ಬಿಜೆಪಿ ಶಾಸಕ ಸಿಕೆ ರಾಮಮೂರ್ತಿ ಅವರ ಕ್ಷೇತ್ರವೊಂದನ್ನು ಬಿಟ್ಟು ಉಳಿದೆಲ್ಲ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಗೆ ಆದೇಶಿಸಿರುವುದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನೂ ಅಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಕ್ರಮಗಳು ಸೇಡಿನ ರಾಜಕಾರಣದಿಂದ ಕೂಡಿವೆ. ಕಾಂಗ್ರೆಸ್‌ಗೆ ಮತ ಹಾಕದ ನಾಗರಿಕರನ್ನು ಶಿಕ್ಷಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಡಿಸಿಎಂ ಡಿಕೆ ಶಿವಕುಮಾರ್ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಅವರ ಬ್ರ್ಯಾಂಡ್ ಬೆಂಗಳೂರು ಕನಸಿನಲ್ಲಿ ಜಯನಗರ ಇಲ್ಲವೇ ಎಂದು ಜಯನಗರ ಶಾಸಕ ಸಿಕೆ ರಾಮಮೂರ್ತಿ ಪ್ರಶ್ನಿಸಿದ್ದಾರೆ. ತಮ್ಮ ಕ್ಷೇತ್ರಕ್ಕೆ ಉದ್ಯಾನವನಗಳು, ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ವಹಿಸಲು ಹಣದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಡಿಸಿಎಂ ತಮ್ಮ ವಿವೇಚನಾ ಅಧಿಕಾರ ಬಳಸಿ ಹೊರಡಿಸಿರುವ ಆದೇಶದ ಪ್ರಕಾರ ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ರೂ., ಬೆಂಗಳೂರು ನಗರ ಜಿಲ್ಲೆಯ ಭಾಗವಾಗಿರುವ ಆನೇಕಲ್‌ಗೆ 5 ಕೋಟಿ ರೂ. ಒಟ್ಟು 265 ಕೋಟಿ ರೂ. ಅನುದಾನ ಘೋಷಿಸಲಾಗಿದೆ.
ಆರ್ ಅಶೋಕ್ ವಾಗ್ದಾಳಿ
ಬೆಂಗಳೂರಿನ ಜಯನಗರ ಕ್ಷೇತ್ರಕ್ಕೆ ಅನುದಾನ ನೀಡದ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, 17 ಮತದಿಂದ ರಾಮಮೂರ್ತಿ ಗೆದ್ದಿದ್ದಕ್ಕೆ ದ್ವೇಷದ ರಾಜಕೀಯ ಮಾಡಲಾಗುತ್ತಿದೆ ಎಂದಿದ್ದಾರೆ. ನಾವು ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್ಗೆ 80 ಕೋಟಿ ರೂ. ಅನುದಾನ ಕೊಟ್ಟಿದ್ದೆವು. ಅನುದಾನ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ಗೆ ನಾನು ಪತ್ರ ಬರೆಯುತ್ತೇನೆ. ದ್ವೇಷದ ರಾಜಕಾರಣ ಮಾಡಬೇಡಿ ಎಂದು ಪತ್ರ ಬರೆಯುತ್ತೇನೆ ಎಂದು ವಿಧಾನಸೌಧದಲ್ಲಿ ಅಶೋಕ್ ಹೇಳಿದ್ದಾರೆ.