ಹಾವೇರಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ, ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಗೃಹಲಕ್ಷ್ಮಿ ಹಣದಿಂದ ಮಹಿಳೆಯರು ಫ್ರಿಡ್ಜ್, ವಾಷಿಂಗ್ ಮಷಿನ್ ಖರೀದಿ ಮಾಡಿದ್ದು, ಅಜ್ಜಿ ಗೃಹಲಕ್ಷ್ಮಿ ಹಣದಿಂದ ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಎಲ್ಲರಿಗೂ ಗೊತ್ತಿರೋ ವಿಚಾರ. ಇದರ ಬೆನ್ನಲ್ಲೇ ಈಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯ ಹಣವನ್ನ ಕೂಡಿಟ್ಟ ಅತ್ತೆಯೊಬ್ಬರು ತಮ್ಮ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟು ಬದುಕು ಕಟ್ಟಿಕೊಡುವ ಮೂಲಕ ಗಮನ ಸೆಳೆದಿದ್ದಾರೆ.
ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ ಅವರು ತಮ್ಮ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು, 20 ಸಾವಿರ ರೂ.,ಗಳಲ್ಲಿ ತಮ್ಮ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ಮಾಡಿ ಕೊಟ್ಟಿದ್ದಾರೆ.
ಶ್ರಾವಣ ಮಂಗಳವಾರದ ಶುಭದಿನದಂದೇ ಫ್ಯಾನ್ಸಿ ಸ್ಟೋರ್‌ಗೆ ಪೂಜೆ ಮಾಡಿ ಚಾಲನೆ ನೀಡಿದರು. ಸಂಭ್ರಮದಿಂದ ಫ್ಯಾನ್ಸಿ ಸ್ಟೋರ್ ಶುರು ಮಾಡಿದ ಅತ್ತೆ-ಸೊಸೆ ಪರಸ್ಪರ ಭಾವುಕರಾದರು. ಸೊಸೆ ಮಗಳಿದ್ದಂಗೆ, ಅವಳು ಹೊರಗೆ ದುಡಿಯೋಕೆ ಹೋಗೋದು ಬೇಡ ಅಂತಾ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.
ಅತ್ತೆ ದ್ರಾಕ್ಷಾಯಿಣಿ ಪಾಟೀಲ ಕಾರ್ಯಕ್ಕೆ ನೀರಲಗಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮೀ ಯೋಜನೆ ನಮ್ಮಂತ ಬಡಕುಟುಂಬಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಕಳೆದ 10 ಕಂತಿನ ಗೃಹಲಕ್ಷ್ಮಿ ಹಣ ಕೂಡಿಟ್ಟು ಸೊಸೆಗೆ ಮನೆಯಲ್ಲೇ ಫ್ಯಾನ್ಸಿ ಸ್ಟೋರ್ ತೆರೆಯಲಾಗಿದೆ. ಇದರಿಂದಾಗಿ ಸೊಸೆ ಹೊರಗಡೆ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದುಕೊಂಡು ಉದ್ಯೋಗ ಮಾಡಬಹುದಾಗಿದೆ ಎಂದು ದ್ರಾಕ್ಷಾಯಿಣಿ ಪಾಟೀಲ್ ಹೇಳಿದರು.