ಬೆಂಗಳೂರು: ಅಕ್ಟೋಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯಡಿ ಹಣದ ಬದಲು ೧೦ ಕೆ ಜಿ ಅಕ್ಕಿ ನೀಡಲಾಗುವುದು. ಟೆಂಡರ್ ಪ್ರಕ್ರಿಯೆ ಸಂಬಂಧಿಸಿದಂತೆ ಮಾತುಕತೆ ಅಂತಿಮ ಹಂತದಲ್ಲಿದ್ದು,ಶೀಘ್ರವೇ ಫಲಾನುಭವಿಗಳಿಗೆ ೧೦ ಅಕ್ಕಿ ಪೂರೈಕೆ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್ ಮುನಿಯಪ್ಪ, ಅಕ್ಕಿ ಕೊರತೆ ಎದುರಾದ ಹಿನ್ನೆಲೆ ಐದು ಕೆಜಿ ಅಕ್ಕಿ ಬದಲಾಗಿ ಪ್ರತಿಯೊಬ್ಬರಿಗೆ ಪ್ರತಿ ತಿಂಗಳು ೧೭೦ ರೂ ಹಣ ವಿತರಿಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಫಲಾನುಭವಿಗಳ ಅಕೌಂಟಿಗೆ ೧೭೦ ರೂ ಹಣವನ್ನು ಸಂದಾಯ ಮಾಡಲಾಗಿತ್ತು.
ಐದು ವರ್ಷವೂ ನಮ್ಮ ಸರ್ಕಾರವೇ ಇರಲಿದೆ. ಶಾಮನೂರು ಶಿವಶಂಕರಪ್ಪ ಅವರೂ ಸೇರಿದಂತೆ ೨೨೪ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಶಾಮನೂರು ಅವರನ್ನು ಒಳಗೊಂಡಂತೆ ಎಲ್ಲರೂ ಸಹಮತದಿಂದ ಈಗಿನ ಸಿಎಂ ಆಯ್ಕೆ ಮಾಡಿದ್ದಾರೆ. ನಮ್ಮಲ್ಲಿ ಏನೇ ಬದಲಾವಣೆಗಳಿದ್ದರೂ ಬೇಡಿಕೆಗಳಿದ್ದರೂ ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಎಲ್ಲರಿಗೂ ಮಾತನಾಡುವ ಹಾಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಕೆ.ಎಚ್ ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.