ಬೆಂಗಳೂರು: ಕೆಎಸ್‌ಆರ್‌ಟಿಸಿಯಿಂದ ವಿವಿಧ ಕಾರಣಗಳಿಂದ ಉಂಟಾಗುವಂತ ಬಸ್ ಅಪಘಾತಗಳ ಸಂದರ್ಭದಲ್ಲಿ ಸಾವನ್ನಪ್ಪುವಂತ ಸಾರ್ವಜನಿಕರಿಗೆ ನೀಡಲಾಗುವಂತ ಪರಿಹಾರದ ಮೊತ್ತವನ್ನು ರೂ.೩ ಲಕ್ಷದಿಂದ ೧೦ ಲಕ್ಷಕ್ಕೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಅಪಘಾತಕ್ಕೀಡಾದಾಗ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ದುರದೃಷ್ಟವಶಾತ್ ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಸದ್ದುದೇಶದಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ನೀಡಲಾಗುತ್ತಿರುವ ಆರ್ಥಿಕ ಪರಿಹಾರ ಮೊತ್ತವನ್ನು ರೂ.೩,೦೦,೦೦೦/-(ರೂ.ಮೂರು ಲಕ್ಷ ಮಾತ್ರ) ದಿಂದ ರೂ.೧೦,೦೦,೦೦೦/-(ರೂ.ಹತ್ತು ಲಕ್ಷ ಮಾತ್ರ) ಗಳಿಗೆ ದಿನಾಂಕ:೦೧-೦೧-೨೦೨೪ ರಿಂದ ಜಾರಿಗೆ ಬರುವಂತೆ ಹೆಚ್ಚಿಸಲಾಗಿದೆ
ಎಂದಿದ್ದಾರೆ.
ಮುಂದುವರೆದು, ಮೃತರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡುವ ಸಲುವಾಗಿ ರೂ.೫೦.೦೦ ರಿಂದ ರೂ.೯೯.೦೦ ರವರೆಗಿನ ಮುಖ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ರೂ.೧.೦೦ (ರೂ.ಒಂದು ಮಾತ್ರ) ಮತ್ತು ರೂ.೧೦೦.೦೦ ಹಾಗೂ ಹೆಚ್ಚಿನ ಬೆಲೆಯ ಟಿಕೇಟ್ ಪಡೆದು ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ ರೂ.೨.೦೦ ರಂತೆ (ರೂ.ಎರಡು ಮಾತ್ರ) ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹಣೆಯನ್ನೂ ಸಹ ದಿನಾಂಕ:೦೧-೦೧-೨೦೨೪ ರಿಂದ ಸಂಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.