ಜೈಪುರ: ರಾಜಸ್ಥಾನದ ಮಹೇಶ್ ನಗರದ ಕೋಚಿಂಗ್ ಸೆಂಟರ್ ವೊಂದರ 10 ವಿದ್ಯಾರ್ಥಿಗಳು ಅನಿಲ ಸೋರಿಕೆಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋಚಿಂಗ್ ಕೇಂದ್ರದ ಬಳಿಯ ಪೈಪ್ ಲೈನ್ ನಿಂದ ಅನಿಲ ಸೋರಿಕೆ ಶಂಕೆ ವ್ಯಕ್ತವಾಗಿದೆ. ಅನಿಲ ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಉಸಿರಾಟದ ತೊಂದರೆ ಮತ್ತು ತಲೆ ನೋವು ಕಾಣಿಸಿಕೊಂಡಿದ್ದು, ಕೆಲ ವಿದ್ಯಾರ್ಥಿಗಳು ಪ್ರಜ್ಞೆ ಕಳೆದುಕೊಂಡಿದ್ದಾರೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆತರಲಾಗಿದೆ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ವ್ಯಕ್ತಿಯೋರ್ವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಜೈಪುರದಲ್ಲಿ ಗ್ಯಾಸ್ ಸೋರಿಕೆಯಾಗಿ ಉತ್ಕರ್ಷ್ ಕೋಚಿಂಗ್ ಸೆಂಟರ್ ನಲ್ಲಿ ಮಕ್ಕಳು ಪ್ರಜ್ಞಾಹೀನರಾದ ಘಟನೆ ಅತ್ಯಂತ ದುಃಖಕರವಾಗಿದೆ. ಮಕ್ಕಳ ಸುರಕ್ಷತೆಯ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿರುವುದು ಇದರಿಂದ ಸಾಬೀತಾಗಿದೆ. ಹಳ್ಳಿಗಳ ಬಡ ಕುಟುಂಬಗಳು ತಮ್ಮ ಮಕ್ಕಳನ್ನು ಉತ್ತಮ ಭವಿಷ್ಯಕ್ಕಾಗಿ ನಗರಕ್ಕೆ ಕಳುಹಿಸುತ್ತಾರೆ, ಆದರೆ ಅವರ ಜೀವನಕ್ಕೆ ಇಲ್ಲಿ ಬೆಲೆ ಇಲ್ಲ. ಮಕ್ಕಳ ಭವಿಷ್ಯ ಮತ್ತು ಸುರಕ್ಷತೆ ಪ್ರಮುಖವಾಗಿದ್ದು, ಸರ್ಕಾರ ಈಗಲಾದರೂ ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.