ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗಸ್ಟ್ ೨೭ಕ್ಕೆ (ಭಾನುವಾರಕ್ಕೆ) ೧೦೦ ದಿನಗಳು. ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಸರ್ಕಾರ ಬದ್ಧತೆಯಿಂದ ನಡೆದುಕೊಂಡಿದೆ. ರಾಜ್ಯದ ಬಹುಸಂಖ್ಯಾತ ಜನಸಮುದಾಯವನ್ನು ತಲುಪುವ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದ ಮೂಲಕ ರಾಜ್ಯ ಸರಕಾರ ಶತ ದಿನಗಳ ಸಂಭ್ರಮಕ್ಕೆ ಕಾಲಿಟ್ಟಿದೆ.
ಬೆಲೆ ಏರಿಕೆ ಹೊಡೆತದಿಂದ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದ ಜನಸಾಮಾನ್ಯರ ದುಗುಡ, ದುಮ್ಮಾನಗಳಿಗೆ ಸ್ಪಂದನೆಯ ಭರವಸೆ ತುಂಬಿರುವ ಗ್ಯಾರಂಟಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ‘ಶಕ್ತಿ’ ಯೋಜನೆಯಿಂದ ಖುಷಿಯಾಗಿರುವ ಮಹಿಳಾ ಸಮುದಾಯ ಇದೀಗ, ‘ಗೃಹ ಲಕ್ಷ್ಮಿ’ ಯನ್ನು ಎದುರು ನೋಡುತ್ತಿದೆ.
ವಾರ್ಷಿಕ ೫೨ ಸಾವಿರ ಕೋಟಿ ರೂ.ಗಳಿಂದ ೫೮ ಸಾವಿರ ಕೋಟಿ ರೂ. ವರೆಗೆ ಆರ್ಥಿಕ ಹೊರೆಗೆ ಕಾರಣವಾಗುವ ಗ್ಯಾರಂಟಿಗಳು ರಾಜ್ಯದ ಇತಿಹಾಸದಲ್ಲೇ ‘ದುಬಾರಿ ಕೊಡುಗೆ’. ಜನರನ್ನು ಓಲೈಸುವ ಗ್ಯಾರಂಟಿ ಘೋಷಣೆಗಳು ಅನುಷ್ಠಾನಗೊಳ್ಳಲು ಸಾಧ್ಯವೇ ಎಂಬ ಸ್ವಪಕ್ಷೀಯರನ್ನೂ ಒಳಗೊಂಡ ಹಲವರ ಅನುಮಾನಗಳಿಗೆ ರಾಜಕೀಯ ಇಚ್ಛಾಶಕ್ತಿಯ ತೀರ್ಮಾನದಿಂದ ಉತ್ತರ ಸಿಕ್ಕಿದೆ.
ಹಣಕಾಸು ಖಾತೆಯನ್ನೂ ನಿರ್ವಹಿಸುವ ಸಿಎಂ ಸಿದ್ದರಾಮಯ್ಯ ಸರಿಸುಮಾರು ೩೬ ದಿನಗಳ ಕಾಲ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಸವಾಲಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ ಬಜೆಟ್‌ನಲ್ಲಿಐದೂ ಗ್ಯಾರಂಟಿಗಳ ಜಾರಿಗೆ ಅನುದಾನ ಖಾತರಿ ಪಡಿಸಿದರು. ಅಂತೆಯೇ ಒಂದೊಂದೇ ಗ್ಯಾರಂಟಿಗಳು ಅನುಷ್ಠಾನದ ಹಾದಿ ತುಳಿದಿವೆ ಮತ್ತು ನಿರೀಕ್ಷೆ ಮೀರಿ ಜನರನ್ನು ತಲುಪಿರುವುದು ವಿಶೇಷವಾಗಿದೆ.

ಐದು ಗ್ಯಾರಂಟಿಗಳಲ್ಲಿಮೂರು ಅನುಷ್ಠಾನಗೊಂಡಿವೆ. ಮೊದಲಿಗೆ ಶಕ್ತಿಯಡಿ ಉಚಿತ ಬಸ್ ಪ್ರಯಾಣದ ಉಡುಗೊರೆ ಮಹಿಳೆಯರನ್ನು ಖುಷಿಪಡಿಸಿದೆ. ಜೂ.೧೧ ರಂದೇ ಚಾಲನೆ ಪಡೆದುಕೊಂಡ ಈ ಯೋಜನೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ.
ಶಕ್ತಿ ಹಾಗೂ ಅನ್ನಭಾಗ್ಯ ಯೋಜನೆಗಳಿಗಿಂತ ಹೆಚ್ಚು ಫಲಾನುಭವಿಗಳನ್ನು ಒಳಗೊಂಡ ಗೃಹ ಜ್ಯೋತಿಯೂ ಸಾಕಾರಗೊಂಡಿದೆ. ಸರಿಸುಮಾರು ಶೇ.೯೮ರಷ್ಟು ಕುಟುಂಬಗಳಿಗೆ ಮಾಸಿಕ ಸರಾಸರಿ (೨೦೦ ಯುನಿಟ್‌ವರೆಗೂ) ಗೃಹ ಬಳಕೆ ವಿದ್ಯುತ್ ಉಚಿತವಾಗಿದೆ.
ಅನ್ನಭಾಗ್ಯಕ್ಕೆ ಅಡಚಣೆಯಾದರೂ ಬಿಡದ ಸರ್ಕಾರ: ಶಕ್ತಿ ಬೆನ್ನಲ್ಲೇ ತಲಾ ೧೦ ಕೆಜಿ ಆಹಾರಧಾನ್ಯ ವಿತರಿಸುವ ‘ಅನ್ಯಭಾಗ್ಯ’ ಯೋಜನೆ ಅನುಷ್ಠಾನಕ್ಕೆ ಸರಕಾರ ಮುಂದಾದರೂ ಅವಶ್ಯಕ ಪ್ರಮಾಣದ ಆಹಾರಧಾನ್ಯ ಲಭ್ಯವಾಗಲಿಲ್ಲ. ಆದರೆ, ಮಾತಿಗೆ ತಪ್ಪದ ಸರಕಾರ ೫ ಕೆಜಿ ಆಹಾರ ಧಾನ್ಯ ವಿತರಣೆ ಮುಂದುವರಿಸಿ ಉಳಿದ ೫ ಕೆಜಿ ಅಕ್ಕಿಯ ಮೊತ್ತವನ್ನು ಫಲಾನುಭವಿಗೆ ವರ್ಗಾಯಿಸುವ ಮೂಲಕ ವಚನ ಬದ್ಧತೆ ಕಾಯ್ದುಕೊಂಡಿರುವುದು ರಾಜ್ಯ ಸರ್ಕಾರ ವೈಶಿಷ್ಟ್ಯ.
ಗೃಹ ಲಕ್ಷ್ಮೀಗೆ ವೇದಿಕೆ ಸಜ್ಜು: ಇದೀಗ ಗೃಹ ಲಕ್ಷ್ಮೀ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ೨ ಸಾವಿರ ಕೊಡುವ ಘೋಷಣೆ ಅನುಷ್ಠಾನಕ್ಕೆ ವೇದಿಕೆ ಅಣಿಯಾಗಿದೆ. ಸಿಎಂ ತವರು ಮೈಸೂರಿನಲ್ಲಿ ಆ.೩೦ರಂದು ಗೃಹ ಲಕ್ಷ್ಮೀ ಚಾಲನೆ ಪಡೆಯುವುದನ್ನು ಮಹಿಳಾ ಸಮುದಾಯ ವಿಶೇಷ ಆಸಕ್ತಿಯಿಂದ ಎದುರು ನೋಡುತ್ತಿದೆ.
