ಬೆಂಗಳೂರು: ಇಂದು ಜನತಾ ದರ್ಶನ ಯಶಸ್ವಿಯಾಗಿ ನಡೆದಿದೆ. ಆಯಾ ಇಲಾಖೆಯವರು ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಲ್ಲಿಕೆಯಾದ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆಯಾ ಇಲಾಖೆಯವರು ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಲಿದ್ದಾರೆ. ೨೦,೦೦೦ ಜನ ಭಾಗವಹಿಸಿದ್ದರು. ಒಟ್ಟು ೧೧,೦೦೦ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಕಂದಾಯ ಇಲಾಖೆಗೆ ಹೆಚ್ಚಿನ ಅಹವಾಲು ಬಂದಿತ್ತು. ಕೆಲವನ್ನು ಸ್ಥಳದಲ್ಲೇ ಇತ್ಯರ್ಥ ಮಾಡಿದ್ದೇವೆ. ಎಲ್ಲ ಜಿಲ್ಲೆಗಳ ಡಿಸಿಗಳಿಗೆ, ಸಂಬಂಧಿತ ಕಾರ್ಯದರ್ಶಿಗಳಿಗೆ ಅರ್ಜಿ ಕಳುಹಿಸಿದ್ದೇವೆ. ಡಿಸಿಗಳು, ಎಸ್‌ಪಿಗಳು ಸಮಸ್ಯೆಗಳನ್ನು ಕೂಡಲೇ ಇತ್ಯರ್ಥ ಮಾಡಬೇಕು ಎಂದು ಸೂಚಿಸಿದರು.
ಜನರು ನಿಮ್ಮ ಬಳಿ ಬಂದಾಗ ನಿಮ್ಮ ಹಂತದಲ್ಲೇ ಕೆಲಸ ಮಾಡಿ ಕೊಡಲೇಬೇಕು. ನಿರ್ಲಕ್ಷ್ಯ ತೋರಿದರೆ, ಜನರಿಗೆ ಅಗೌರವ ತೋರಿದರೆ ಅಂಥ ಅಧಿಕಾರಿಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ವಹಿಸಲಾಗುವುದು. ಇಂದು ಅರ್ಜಿ ಕೊಟ್ಟ ಜನರು ಯಾವುದೇ ಸಂಶಯ, ಚಿಂತೆಪಡುವ ಅಗತ್ಯ ಇಲ್ಲ. ನೀವು ಕೊಟ್ಟ ಎಲ್ಲಾ ಅರ್ಜಿಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.