Thursday, April 3, 2025
Google search engine

Homeರಾಜ್ಯಸುದ್ದಿಜಾಲಮರವಂತೆ 'ಹ್ಯಾಚರಿ'ಯಲ್ಲಿ ಮೊಟ್ಟೆ ಒಡೆದು ಕಡಲು ಸೇರಿದ 115 ಕಡಲಾಮೆ ಮರಿಗಳು

ಮರವಂತೆ ‘ಹ್ಯಾಚರಿ’ಯಲ್ಲಿ ಮೊಟ್ಟೆ ಒಡೆದು ಕಡಲು ಸೇರಿದ 115 ಕಡಲಾಮೆ ಮರಿಗಳು

ಉಡುಪಿ: ಕಳೆದ 40 ದಿನಗಳ ಹಿಂದೆ ಮರವಂತೆ ಸಮುದ್ರ ತೀರ ಹಾಗೂ ಬೈಂದೂರಿನ ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಣೆ ಮಾಡಲಾಗಿತ್ತು. ಅದರಲ್ಲಿ ಮರವಂತೆ ‘ಹ್ಯಾಚರಿ’ಯಲ್ಲಿ ಮೊಟ್ಟೆಗಳು ಒಡೆದು ಸುಮಾರು 115 ಮರಿಗಳು ಹೊರಬಂದು ಕಡಲು ಸೇರಿವೆ. ಜನವರಿ ತಿಂಗಳ ಅಂತ್ಯದಲ್ಲಿ ಮರವಂತೆ ಹಾಗೂ ತಾರಾಪತಿ ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆಗಳನ್ನಿಟ್ಟಿದ್ದವು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಹಿತ ಈ ಬಗ್ಗೆ ಮುತುವರ್ಜಿ ವಹಿಸಲು ಆಸಕ್ತ ಸಂಘ- ಸಂಸ್ಥೆಗಳಿಗೆ ಮಾಹಿತಿ ನೀಡಿದ್ದರು. ಅದರಂತೆ ಮರವಂತೆ ಹಾಗೂ ತಾರಾಪತಿಯಲ್ಲಿ ಪ್ರತ್ಯೇಕ 2 ಹ್ಯಾಚರಿ ನಿರ್ಮಿಸಲಾಗಿತ್ತು. ಇದೀಗ ಮರವಂತೆ ಹ್ಯಾಚರಿಗಳಿಂದ ಒಟ್ಟು 115 ಕಡಲಾಮೆ ಮರಿಗಳು ಹೊರಕ್ಕೆ ಬಂದಿದ್ದು ಹೊರಕ್ಕೆ ಬಂದ ಕಡಲಾಮೆ ಮರಿಗಳು ನೈಸರ್ಗಿಕವಾಗಿ ಕಡಲು ಸೇರಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಒಗ್ಗೂಡಿ ಅನುವು ಮಾಡಿಕೊಟ್ಟರು. ತಾರಾಪತಿಯ ಹ್ಯಾಚರಿಯಿಂದ ಮುಂದಿನ ವಾರದಲ್ಲಿ ಮರಿಗಳು ಬರುವ ನಿರೀಕ್ಷೆಯಿದೆ.

ಸಮುದ್ರದಿಂದ ಹೊರಬಂದು ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತವೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ 40ಕ್ಕೂ ಅಧಿಕ ದಿನಗಳಿಂದ ಮುತುವರ್ಜಿ ವಹಿಸಿದ್ದು ಮಾತ್ರವಲ್ಲದೇ ಮರಿಯೊಡೆಯುವ ರಾತ್ರಿ ತನಕವೂ ನಿಗಾವಹಿಸಿದ್ದ ಅರಣ್ಯ ಇಲಾಖೆ, ಸ್ಥಳೀಯರ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು. ಕಡಲಿನ ಸ್ವಚ್ಛತೆ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಅಳಿವಿನ ಅಂಚಲ್ಲಿರುವ ಕಡಲಾಮೆ ರಕ್ಷಣೆ ಆಗುತ್ತಿದೆ.

RELATED ARTICLES
- Advertisment -
Google search engine

Most Popular