Friday, April 11, 2025
Google search engine

Homeರಾಜ್ಯ125 ವರ್ಷದ ಸಮಸ್ಯೆ 24 ಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ: ಎಚ್‌ಡಿಕೆ

125 ವರ್ಷದ ಸಮಸ್ಯೆ 24 ಗಂಟೆಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ: ಎಚ್‌ಡಿಕೆ

ಪಾಂಡವಪುರ: ಕಾವೇರಿ ಸಮಸ್ಯೆಯನ್ನು 125 ವರ್ಷಗಳಿಂದಲೂ ಎದುರಿಸುತ್ತಿದ್ದೇವೆ. ಈಗ ದಿಢೀರನೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಪರಿಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಜೆಡಿಎಸ್ ಮತ್ತು ಬಿಜೆಪಿಯಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಈಚೆಗೆ ನಾನು ಮಂಡ್ಯದಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮಕ್ಕೆ ಅಧಿಕಾರಿಗಳು ಹೋಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದರು. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರ್ಕಾರವು ನನ್ನನ್ನು ಬಳಸಿಕೊಳ್ಳುತ್ತಿಲ್ಲ. ಆದ್ದರಿಂದ ಅವರು ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಗೆ ನಾನು ಹೋಗಲಿಲ್ಲ ಎಂದು ತಿಳಿಸಿದರು.

ಪಕ್ಕದ ರಾಜ್ಯದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬೃಹತ್ ಕೈಗಾರಿಕೆ ಸ್ಥಾಪಿಸಿ ಅಭಿವೃದ್ಧಿಪಡಿಸಿ ಎಂದು ಆಹ್ವಾನ ನೀಡುತ್ತಾರೆ. ಆದರೆ, ನಮ್ಮಲ್ಲಿ ಬಳಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ನಂತರದಲ್ಲಿ ಕಾವೇರಿ ವಿಷಯದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸಿದವರೆಂದರೆ ಎಚ್‌.ಡಿ. ದೇವೇಗೌಡರು ಮಾತ್ರ. ಅದನ್ನು ಅರಿಯದೆ ಕೆಲವರು ಲಘುವಾಗಿ ಮಾತನಾಡುತ್ತಾರೆ. ಕಾವೇರಿ ಹೋರಾಟದಲ್ಲಿ ದೇವೇಗೌಡರ ಪಾತ್ರವನ್ನು, ರಾಜ್ಯ ಆಳುತ್ತಿರುವವರು ಮರೆಯಬಾರದು. 125 ವರ್ಷಗಳ ಸಮಸ್ಯೆಯನ್ನು 24 ಗಂಟೆಗಳಲ್ಲಿ ಬಗೆಹರಿಸಿ ಎನ್ನುವುದು ಎಷ್ಟು ಸರಿ? ಎಂದು ಕೇಳಿದರು.

ದಲಿತರ ಬಗ್ಗೆ ಮಾತನಾಡುವ ಮುಖ್ಯಮಂತ್ರಿ, ಪರಿಶಿಷ್ಟರ ಅಭಿವೃದ್ಧಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಎಷ್ಟು ಸರಿ? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರ ಭಂಡತನವನ್ನು ತೋರುತ್ತಿದೆ ಎಂದು ಹರಿಹಾಯ್ದರು.

ನಾನು ಲೋಕಸಭಾ ಚುನಾವಣೆಯಲ್ಲಿ ಸೋತರೆ, ಒಕ್ಕಲಿಗ ಸಮುದಾಯವನ್ನು ಸೆಳೆಯಬಹುದು ಎಂಬ ಕನಕಪುರದ ಗೆಳೆಯರ ಲೆಕ್ಕಾಚಾರ ತಪ್ಪಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಪರೋಕ್ಷವಾಗಿ ಟೀಕಿಸಿದರು.

RELATED ARTICLES
- Advertisment -
Google search engine

Most Popular