ಮಂಗಳೂರು: ಮನೆಯೊಂದರಿಂದ ೧೩ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಹೆಲೆನ್ ಲೋಬೊ ಎಂಬವರ ಮನೆಯಿಂದ ಚಿನ್ನಾಭರಣ ಕಳ್ಳತನವಾಗಿದ್ದು, ಇವರು ಮಗಳ ಮಗುವಿನ ನಾಮಕರಣ ಕಾರ್ಯಕ್ರಮಕ್ಕಾಗಿ ೨೦೨೩, ಜನವರಿ ೪ರಂದು ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ತಮ್ಮ ಬಳಿಯಿದ್ದ ಚಿನ್ನಾಭರಣಗಳನ್ನು ಪಕ್ಕದ ಮನೆಯ ಮೇಬಲ್ ಫಾಂಟೆಸ್ ಎಂಬವರಿಗೆ ನೀಡಿ ತೆರಳಿದ್ದರೆನ್ನಲಾಗಿದೆ.
ಬಳಿಕ ಚಿನ್ನಾಭರಣವನ್ನು ಹೆಲೆನ್ ಲೋಬೊ ಪಡೆದು ಮನೆಯಲ್ಲಿರಿಸಿದ್ದರು. ೨೦೨೪ ಜೂನ್ ೧೬ರಂದು ಚಿನ್ನಾಭರಣಗಳನ್ನು ಪರಿಶೀಲಿಸಿದಾಗ ನೆಕ್ಲೆಸ್, ಚೈನ್ , ಕರಿಮಣಿ ಸರ , ಕೈಬಳೆ, ಕಿವಿಯ ಓಲೆ ಸೇರಿದಂತೆ ಸುಮಾರು ೧೩ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.