ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸುವ 14 ಗಜಪಡೆಗೆ ಹಾಗೂ ಮಾವುತರು, ಕಾವಾಡಿಗರು ಹಾಗೂ ಆನೆ ಜೊತೆ ಇರುವ ಅರಣ್ಯ ಸಿಬ್ಬಂದಿಗೆ ಮುಂಜಾಗೃತಾ ಕ್ರಮವಾಗಿ ವಿಮೆ ಮಾಡಿಸಲಾಗಿದೆ. ಇದು ಸೆ. 1ರಿಂದ ಅಕ್ಟೋಬರ್ ಅಂತ್ಯದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ.
ಪ್ರತಿ ವರ್ಷ ಮುಂಜಾಗೃತಾ ಕ್ರಮವಾಗಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ, ಮಾವುತರಿಗೆ ಹಾಗೂ ಕಾವಾಡಿಗರಿಗೆ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಮೆ ಮಾಡಿಸಲಾಗುತ್ತದೆ. ಈಗಾಗಲೇ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ೯ ಗಜಪಡೆ ಜೊತೆಗೆ ಎರಡನೇ ಹಂತದಲ್ಲಿ ಆಗಮಿಸುವ ೫ ಗಜಪಡೆಗೆ ಈ ವಿಮೆ ಮಾಡಿಸಲಾಗಿದೆ. ವಿಮೆಯಲ್ಲಿ ೧೪ ಆನೆಗಳು, ೧೪ ಮಾವುತರು, ೧೪ ಮಂದಿ ಕಾವಾಡಿಗರು, ೬ ಮಂದಿ ವಿಶೇಷ ಮಾವುತರು, ಅರಣ್ಯಾಧಿಕಾರಿಗಳಾದ ಆರ್‌ಎಫ್‌ಓ, ಡಿಆರ್‌ಎಫ್‌ಓ, ಪಶುವೈದ್ಯರು, ಸಹಾಯಕರು ಸೇರಿದಂತೆ ಇತರ ಸಿಬ್ಬಂದಿಗೆ ಮುಂಜಾಗೃತಾ ಕ್ರಮವಾಗಿ ಸೆಪ್ಟೆಂಬರ್ ೧ರಿಂದ ಆಕ್ಟೋಬರ್ ಅಂತ್ಯದವರೆಗೆ ಅನ್ವಯವಾಗುವ ರೀತಿ, ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯೊಂದಿಗೆ ಆನೆಗಳನ್ನು ವಿಮೆ ಮಾಡಲಾಗಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ಮಾಹಿತಿ ನೀಡಿದರು.
ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಒಟ್ಟು ೧೪ ಆನೆಗಳ ಪೈಕಿ, ೧೦ ಗಂಡಾನೆ ೪ ಹೆಣ್ಣಾನೆಗಳಿಗೆ ವಿಮೆ ಮಾಡಿಸಲಾಗಿದೆ. ಪ್ರತಿ ಗಂಡಾನೆಗೆ ೫ ಲಕ್ಷ, ಹೆಣ್ಣಾನೆಗಳಿಗೆ ೪.೫೦ ಲಕ್ಷ ರೂ. ಹಾಗೂ ಮಾವುತರು, ಕಾವಾಡಿಗರು, ಸಿಬ್ಬಂದಿಗೆ ೨ ಲಕ್ಷ ರೂ. ಇದರ ಜೊತೆಗೆ ಆಸ್ತಿ ಹಾಗೂ ಜೀವ ಹಾನಿಗೆ ೫೦ ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ಈ ವಿಮೆ ಸೆಪ್ಟೆಂಬರ್ ೧ರಿಂದ ಜಂಬೂಸವಾರಿ ಮುಗಿಯುವವರೆಗೂ ಅಂದರೆ, ಆಕ್ಟೋಬರ್ ೨೬ರವರೆಗೆ ಗಜಪಡೆ ಮರಳಿ ಕಾಡಿಗೆ ಹೋಗುವವರೆಗೂ ವಿಮೆ ಚಾಲ್ತಿಯಲ್ಲಿರುತ್ತದೆ.
೧೪ ಆನೆಗಳಲ್ಲಿ ೧೦ ಗಂಡಾನೆಗೆ ೫೦ ಲಕ್ಷ ರೂ., ನಾಲ್ಕು ಹೆಣ್ಣಾನೆಗಳಿಗೆ ೧೮ ಲಕ್ಷ ರೂ. ಆಸ್ತಿ ಮತ್ತು ಜೀವ ಹಾನಿಗೆ ೫೦ ಲಕ್ಷ ರೂ. ಇದರ ಜೊತೆಗೆ ಮಾವುತರು, ಕಾವಾಡಿಗರು, ವಿಶೇಷ ಮಾವುತರು, ಅರಣ್ಯ ಇಲಾಖೆಯ ಸಿಬ್ಬಂದಿ, ಮೇಲುಸ್ತುವಾರಿ ಸಿಬ್ಬಂದಿ ಸೇರಿದಂತೆ ಇತರ ೪೨ ಮಂದಿಗೆ ತಲಾ ೨ ಲಕ್ಷದಂತೆ ೮೪ ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆ ಮಾವುತರು, ಕಾವಾಡಿಗರು, ಅರಣ್ಯ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಒಟ್ಟಾಗಿ ೨.೦೨ ಕೋಟಿ ರೂಪಾಯಿ ವಿಮೆಯನ್ನು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯೊಂದಿಗೆ ಆನೆಗಳನ್ನು ವಿಮೆ ಮಾಡಲಾಗಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದ್ದಾರೆ.