ಬೆಂಗಳೂರು: ಶ್ರೀಮಂತರನ್ನು ಗುರಿ ಮಾಡಿಕೊಂಡು ಕೋಟ್ಯಂತರ ರೂ. ನಗದು ಪಡೆದು ವಿದೇಶಿ ಕರೆನ್ಸಿಗೆ ಬದಲಾಯಿಸಿ ಲಾಭ ಮಾಡಿಕೊಡುವುದಾಗಿ ನಂಬಿಸಿ ದರೋಡೆ ಮಾಡುತ್ತಿದ್ದ ಹದಿನೈದು ಮಂದಿಯನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಈ ಪ್ರಕರಣದಲ್ಲಿ ದೂರುದಾರನೇ ದರೋಡೆಯ ಮಾಸ್ಟರ್ ಮೈಂಡ್ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರಣ್ಯಪುರ ನಿವಾಸಿಗಳಾದ ಬೆಂಜಮಿನ್ ಹರ್ಷ (45) ಮತ್ತು ಆತನ ಸಹಚರರಾದ ಎಂ. ರಕ್ಷಿತ್ (29), ಎಚ್.ಎಸ್. ಚಂದ್ರಶೇಖರ್ (58), ಸೈಯದ್ ಅಕೀಬ್ (30), ಮೊಹಮದ್ ಸುಹೇಲ್ (28), ಸಲ್ಮಾನ್ (32), ಎಸ್. ಮುಹೀಬ್ (30), ಮೋಸಿನ್ ಖಾನ್ (32), ಸಲ್ಮಾನ್ ಖಾನ್ (35), ಶ್ರೀಹರ್ಷ (33), ಸೈಯದ್ ಅಮೊದ್ (31), ಸೈಯದ್ ಆಫ್ರೀದ್ (31), ಶೇಖ್ ವಸಿಂ (23), ಸೈಯದ್ ವಸೀಂ (23), ಮೊಹಮದ್ ಅತೀಕ್ (38) ಬಂಧಿತರು. ಆರೋಪಿಗಳಿಂದ 1.11 ಕೋಟಿ ರೂ. ಮೌಲ್ಯದ 4 ಕಾರುಗಳು, 4 ಬೈಕ್‌ಗಳು, 2 ಆಟೋಗಳು, 2 ಚಾಕು, 8 ಮೊಬೈಲ್‌ಗಳು ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.
ಆರೋಪಿಗಳ ಪೈಕಿ ಶ್ರೀಹರ್ಷ ಜೂ. 25ರಂದು ಎಂ.ಎಸ್. ಪಾಳ್ಯದಲ್ಲಿ ಪರಿಚಿತ ದುಷ್ಕರ್ಮಿಗಳು 2 ಕೋಟಿ ರೂ. ನಗದು ಕಸಿದು ಪರಾರಿಯಾಗಿದ್ದಾರೆ ಎಂದು ಕಥೆ ಸೃಷ್ಟಿಸಿ ಪೊಲೀಸರಿಗೆ ದೂರು ನೀಡಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿ ರೌಡಿಶೀಟರ್‌ಗಳಾದ ಮೊಹಮದ್ ಸುಹೈಲ್, ಸೈಯದ್ ಅಕೀಬ್ ಪಾಷಾ ಹಾಗೂ ಬೆಂಜಮಿನ್‌ನನ್ನು ಬಂಧಿಸಿದ್ದರು. ಬಳಿಕ ಆರೋಪಿಗಳ ವಿಚಾರಣೆ ವೇಳೆ 2 ಕೋಟಿ ರೂ. ದರೋಡೆಯ ಅಸಲಿ ರೂವಾರಿಯೇ ಶ್ರೀಹರ್ಷ ಎಂಬುದು ಬಯಲಾಗಿತ್ತು. ಈ ಬೆನ್ನಲ್ಲೇ ಶ್ರೀಹರ್ಷ ಸೇರಿ 15 ಆರೋಪಿಗಳನ್ನು ಬಂಧಿಸಲಾಯಿತು. ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.