ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೆ ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಸಂಘರ್ಷ ಉಂಟಾಗಿತ್ತು. ಇದೀಗ ಬಿಜೆಪಿ ಶಾಸಕರುಗಳ ಮಾತು ಕೇಳಿ ರಾಜ್ಯಪಾಲರು 15 ಬಿಲ್ ಗಳನ್ನು ವಾಪಸ್ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಕೆ ಶಿವಕುಮಾರ್, ಬಿಜೆಪಿಯವರ ಮಾತನ್ನೇ ಕೇಳುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳು ಏಕಿರಬೇಕು. ಏನಾದರು ಸ್ಪಷ್ಟನೆ ಕೇಳಿದರೆ ನೀಡೋಣ. ಅದನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ರಾಜ್ಯಪಾಲರಿಗೆ ದೇವರು ಒಳ್ಳೆ ಬುದ್ದಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಗವರ್ನರ್ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಿರುವ ಡಿಕೆ ಶಿವಕುಮಾರ್, ಏನೇ ಮಾಡಿದರೂ ಸರ್ಕಾರ ಬೀಳಿಸೋಕೆ ಸಾಧ್ಯವಿಲ್ಲ. ಸರ್ಕಾರ ಬೀಳಿಸಲು ಯತ್ನಿಸಿದ್ರೆ ಸುಮ್ಮನಿರಲ್ಲ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.