ಭಾರತದ ಸ್ವಾತಂತ್ರ್ಯ ಚಳವಳಿಗೆ ಪ್ರೇರಣೆಯಾದ ರಾಷ್ಟ್ರಗೀತೆಯಾದ ‘ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆಯನ್ನು ಬ್ರಹ್ಮಕುಮಾರೀಸ್ ವತಿಯಿಂದ ಭಕ್ತಿಭಾವ, ದೇಶಭಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮವು ಬ್ರಹ್ಮಕುಮಾರೀಸ್ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳಾದ ಬಾಲಕೃಷ್ಣ ಮತ್ತು ಮೊಹಮ್ಮದ್ ಖಾಜಿ ಹಾಗೂ ಬ್ರಹ್ಮಕುಮಾರಿ ಸಹೋದರ ಸಹೋದರಿಯರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆಯಿತು.
‘ವಂದೇ ಮಾತರಂ’ ಗೀತೆಯನ್ನು ರಚಿಸಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯರು ಅವರ ಮಹತ್ವದ ಕೊಡುಗೆಯನ್ನು ಸ್ಮರಿಸಲಾಯಿತು. ಈ ಗೀತೆಯು ಭಾರತೀಯರಲ್ಲಿ ರಾಷ್ಟ್ರಭಾವನೆ ಹಾಗೂ ಏಕತೆಯನ್ನು ಜಾಗೃತಗೊಳಿಸಿದ ರೀತಿಯನ್ನು ಬ್ರಹ್ಮ ಕುಮಾರಿ ವಿಶ್ವೇಶ್ವರಿ ವಿವರಿಸಿದರು. ‘ವಂದೇ ಮಾತರಂ’ ಕೇವಲ ಒಂದು ಗೀತೆ ಮಾತ್ರವಲ್ಲ, ಅದು ಮಾತೃಭೂಮಿಗೆ ಸಲ್ಲಿಸುವ ಪವಿತ್ರ ವಂದನೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಂದೇ ಮಾತರಂ ಸಮೂಹ ಪಠಣ, ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಮಹತ್ವದ ಕುರಿತು ಚಿಂತನೆಗಳು, ಹಾಗೂ ನಿಜವಾದ ರಾಷ್ಟ್ರ ನಿರ್ಮಾಣಕ್ಕೆ ಆಂತರಿಕ ಶುದ್ಧತೆ, ಆತ್ಮಜಾಗೃತಿ ಅಗತ್ಯವೆಂಬ ಸಂದೇಶಗಳನ್ನು ನೀಡಲಾಯಿತು. ವೈಯಕ್ತಿಕ ಪರಿವರ್ತನೆಯೇ ಸಮಾಜ ಮತ್ತು ರಾಷ್ಟ್ರ ಪರಿವರ್ತನೆಗೆ ಅಡಿಪಾಯ ಎಂಬುದನ್ನು ಬ್ರಹ್ಮಕುಮಾರಿ ವಿಶ್ವೇಶ್ವರಿ ಒತ್ತಿ ಹೇಳಿದರು.
ಶಾಂತಿ, ಸೌಹಾರ್ದತೆ, ಸತ್ಯನಿಷ್ಠೆ ಮತ್ತು ವಿಶ್ವಭ್ರಾತೃತ್ವದಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಭಾಗವಹಿಸಿದವರಿಗೆ ಪ್ರೇರಣೆ ನೀಡಲಾಯಿತು. ದೇಶದ ಪ್ರಗತಿಗೆ ಆತ್ಮಿಕ ಶಕ್ತಿ ಹಾಗೂ ನೈತಿಕ ಮೌಲ್ಯಗಳ ಪಾತ್ರವನ್ನು ಈ ಸಂದರ್ಭ ವಿಶೇಷವಾಗಿ ವಿವರಿಸಲಾಯಿತು.
ಶಂಶೀರ್ ಬುಡೋಳಿ



