Sunday, April 20, 2025
Google search engine

Homeರಾಜ್ಯಸುದ್ದಿಜಾಲ158 ಹಳ್ಳಿಗಳಿಗೆ ವಿವಿ ಸಾಗರದಿಂದ ಕುಡಿಯುವ ನೀರು ಕಾಮಗಾರಿಗೆ ಶೀಘ್ರ ಚಾಲನೆ : ಶಾಸಕ ಕೆ.ಸಿ.ವೀರೇಂದ್ರ...

158 ಹಳ್ಳಿಗಳಿಗೆ ವಿವಿ ಸಾಗರದಿಂದ ಕುಡಿಯುವ ನೀರು ಕಾಮಗಾರಿಗೆ ಶೀಘ್ರ ಚಾಲನೆ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ 158 ಗ್ರಾಮಗಳಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಶುದ್ಧ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಸಿ. ವೀರೇಂದ್ರ ಪ್ಪಪಿ ಅವರು ಹೇಳಿದರು.

ನಗರದ ತ.ರಾ.ಸು ರಂಗಮಂದಿರದಲ್ಲಿ ಬುಧುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ನಗರ ಸಭೆ ವತಿಯಿಂದ ಆಯೋಜಿಸಲಾದ ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ತಾಲ್ಲೂಕಿನ 158 ಹಳ್ಳಿಗಳಿಗೆ ವಾಣಿ ವಿಲಾಸ ಸಾಗರದಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಿ, ಕುಡಿಯುವ ನೀರಿನ ಬವಣೆಗೆ ಮುಕ್ತಿ ಹಾಡಲಾಗುವುದು. ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಹಳ್ಳಿಗಳಲ್ಲಿನ ಚರಂಡಿಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಈಗಾಗಲೆ ಸೂಚನೆ ನೀಡಲಾಗಿದೆ. ಚರಂಡಿಗಳ ಸ್ವಚ್ಛತೆ ಬಳಿಕ, ಗ್ರಾಮಸ್ಥರು ಪುನಃ ಚರಂಡಿಗಳಿಗೆ ಕಸವನ್ನು ಸುರಿಯಬಾರದು, ಹೀಗಾದಲ್ಲಿ ಚರಂಡಿ ನೀರು ಕಟ್ಟಿಕೊಂಡು, ನೀರು ನಿಂತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತದೆ. ಗ್ರಾಮಗಳ ಸ್ವಚ್ಛತೆಯಲ್ಲಿ ಜನರೂ ಕೂಡ ತಮ್ಮ ಜವಾಬ್ದಾರಿಯನ್ನು ಅರಿತು, ನೈರ್ಮಲ್ಯ ಕಾಪಾಡಿಕೊಳ್ಳಲು ಸಹಕರಿಸಬೇಕು, ಗ್ರಾಮದ ಯುವಕರು ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು. ನಗರಕ್ಕೆ ಹೊಂದಿಕೊಂಡಿರು ಮಲ್ಲಾಪುರ ಕೆರೆ ಸ್ವಚ್ಛಗೊಳಿಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೂರದೃಷ್ಟಿ ಫಲವಾಗಿ ಸರ್ಕಾರಿ ಅಧಿಕಾರಿಗಳೇ ಜನರ ಬಳಿಗೆ ತೆರಳಿ ಅಹವಾಲುಗಳನ್ನು ಆಲಿಸುವಂತೆ ಆಗಿದೆ. ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ತಡಮಾಡದೆ ತಕ್ಷಣವೇ ಕ್ರಮ ಕೈಗೊಳ್ಳಲಾಗುವುದು. 3 ತಿಂಗಳ ನಂತರ ಚಿತ್ರದುರ್ಗ ತಾಲೂಕಿಗೆ ಸಂಬಂಧಿಸಿದಂತೆ ನಡೆಯುವ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಇಂದು ಸಲ್ಲಿಸಿದ ಅರ್ಜಿಗಳಿಗೆ ಪರಿಹಾರ ದೊರಕದಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತರಬಹದು. ಇಂದು ಜರುಗಿದ ಜನತಾ ದರ್ಶನದಲ್ಲಿ ನಾಗರಿಕ, ವೈಯಕ್ತಿಕ ಹಾಗೂ ಗ್ರಾಮಗಳ ಸಮಸ್ಯೆಗಳನ್ನು ಕುರಿತು ಜನರು ಅಹವಾಲು ಸಲ್ಲಿಸಿದ್ದಾರೆ. ಇವುಗಳನ್ನು ಶೀಘ್ರ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿದ್ಯಾವಿಕಾಸ ಯೋಜನೆಯಡಿ ತಾಲೂಕಿನ 25,472 ಮಕ್ಕಳಿಗೆ ಎರಡನೇ ಹಂತದ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ಕೆ ಸಾಂಕೇತಿಕವಾಗಿ ಮಕ್ಕಳಿಗೆ ಸಮವಸ್ತ್ರ ವಿತರಿಸುವ ಮೂಲಕ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮೀ, ಸುಕನ್ಯಾ ಸಮೃದ್ದಿ ಯೋಜನೆಗಳ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡಿದರು.

ಕಂದಾಯ ಇಲಾಖೆ ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆಗಳ ಫಲಾನುಭವಿಗಳ ಅರ್ಜಿಯನ್ನು ಸ್ಥಳದಲ್ಲಿಯೇ ಸ್ವೀಕರಿಸಿ, ಮಂಜೂರಾತಿ ಪತ್ರದ ಆದೇಶ ಪ್ರತಿಗಳನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು. ಅಂಗವಿಕಲರ ವೇತನ ಭತ್ಯೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. 94 ಸಿ ಅಡಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಿದ ಹಕ್ಕು ಪತ್ರಗಳನ್ನು ಫಲಾನುಭವಿಗೆ ನೀಡಲಾಯಿತು. ಇದರಿಂದ ಫಲಾನುವಿಗಳಿಗೆ ಮನೆಯ ಒಡೆತನದ ಹಕ್ಕು ಲಭಿಸಿ ಅದನ್ನು ಪರಭಾರೆ ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆದು ಅಭಿವೃದ್ಧಿ ಪಡಿಸಲು ಅವಕಾಶ ಲಭಿಸಿದೆ.

ಕಾರ್ಯಕ್ರಮಕ್ಕೂ ಮುನ್ನಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯತಿ ಅಭಿವೃದ್ಧಿ ಹಾಗೂ ಅರ್ನಿಬಂಧಿತ ಅನುದಾನ, ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಅನುದಾನದಡಿ 16 ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಲಾಯಿತು.

ಅಹವಾಲುಗಳ ಸ್ವೀಕಾರಕ್ಕಾಗಿ ತ.ರಾ.ಸು. ರಂಗಮಂದಿರದಲ್ಲಿ 4 ಕೌಂಟರ್‍ಗಳನ್ನು ತೆರೆಯಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಸ್ಥಳದಲ್ಲಿಯೇ ಕೌಂಟರ್ ತೆರೆದು ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡುಗಳನ್ನು ಸಾರ್ವಜನಿಕರಿಗೆ ಮುದ್ರಿಸಿಕೊಡಲಾಯಿತು. ಜಿ.ಪಂ. ಸಿಇಓ ಎಸ್.ಜಿ.ಸೋಮಶೇಖರ್, ಉಪವಿಭಾಗಧಿಕಾರಿ ಎಂ.ಕಾರ್ತೀಕ್, ತಹಶೀಲ್ದಾರ್ ಡಾ.ನಾಗವೇಣಿ, ತಾ.ಪಂ. ಇ.ಓ ಹನುಮಂತಪ್ಪ, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿತ್ರದುರ್ಗ ನಗರದ ಪ್ರಮುಖ ಬಿ.ಡಿ. ರಸ್ತೆ ಹಾಗೂ ತುರುವನೂರು ರಸ್ತೆಯಲ್ಲಿ ಫುಟ್‍ಪಾತ್‍ಗಳನ್ನು ಅಂಗಡಿಕಾರರೇ ಬಳಸುತ್ತಿದ್ದಾರೆ, ಪಾದಚಾರಿಗಳು ಓಡಾಡಲು ಅವಕಾಶವಾಗುತ್ತಿಲ್ಲ, ನಗರದ ತ.ರಾ.ಸು. ರಂಗಮಂದಿರದ ಶೌಚಾಲಯಗಳು ಹಾಳಾಗಿದ್ದು, ಸರಿಪಡಿಸಬೇಕಿದೆ, ನಗರದ ರಾಜಕಾಲುವೆಗಳು ಒತ್ತುವಾರಿಯಾಗಿದ್ದು, ತೆರವಿಗೆ ನಗರಸಭೆ ಕ್ರಮ ಕೈಗೊಳ್ಳಬೇಕು, ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಸಮಸ್ಯೆ, ಜಮೀನಿನ ಸರ್ವೆ ಮಾಡಿಕೊಡುವುದು, ನಿವೇಶನ ಹಾಗೂ ಮನೆ ಕೋರಿಕೆ ಸೇರಿದಂತೆ ವಿವಿಧ ಅಹವಾಲುಗಳು ಸಲ್ಲಿಕೆಯಾದವು. ಜನತಾದರ್ಶನದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲುಗಳಿಗೆ ಸಂಬಂಧಿಸಿದಂತೆ ಸುಮಾರು 230 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾದವು.

RELATED ARTICLES
- Advertisment -
Google search engine

Most Popular