ಬೆಂಗಳೂರು: ನಟ ಮಾಸ್ಟರ್ ಆನಂದ್ ಗೆ ನಿವೇಶನ ಕೊಡಿಸುವುದಾಗಿ ನಂಬಿಸಿ, 18.5 ಲಕ್ಷ ರೂಪಾಯಿ ವಂಚಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಚಂದ್ರ ಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಬಿಯುಡಿಎಸ್ ಕಾಯ್ದೆ 2019ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
2020ರ ಸೆಪ್ಟೆಂಬರ್ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಈ ವಂಚನೆ ನಡೆದಿದೆ. ಮಲ್ಟಿ ಲೀಪ್ ವೆಂಚರ್ಸ್ ಕಂಪೆನಿ ವಿರುದ್ಧ ಮಾಸ್ಟರ್ ಆನಂದ್ ದೂರು ಕೊಟ್ಟಿದ್ದಾರೆ. ಕೊಮ್ಮಘಟ್ಟದ ರಾಮಸಂದ್ರ ಗ್ರಾಮದದಲ್ಲಿ ಆನಂದ್ ನಿವೇಶನ ನೋಡಿದ್ದರು. ಶೂಟಿಂಗ್ಗಾಗಿ ತೆರಳಿದ್ದ ವೇಳೆ ಇವುಗಳ ವೀಕ್ಷಣೆ ಮಾಡಿದ್ದರು. ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರುವುದಾಗಿಯೂ ಕಂಪನಿಯವರು ಹೇಳಿದ್ದರು.
ಆ ಬಳಿಕ ರಾಮಸಂದ್ರದಲ್ಲಿ 200 ಅಡಿ ವಿಸ್ತೀರ್ಣದ ನಿವೇಶನವನ್ನು ಮಲ್ಟಿ ಲೀಪ್ ವೆಂಚರ್ಸ್ ತೋರಿಸಿತ್ತು. 70 ಲಕ್ಷ ರೂಪಾಯಿಗೆ ಇದನ್ನು ಖರೀದಿಸಲು ಮಾಸ್ಟರ್ ಆನಂದ್ ಒಪ್ಪಿದ್ದರು. ಮುಂಗಡ ಹಣದ ರೂಪದಲ್ಲಿ 18.5 ಲಕ್ಷ ರೂಪಾಯಿ ನೀಡಿದ್ದರು. ಕಂಪನಿಯವರು ಮಾಸ್ಟರ್ ಆನಂದ್ ಹಾಗು ಪತ್ನಿ ಯಶಸ್ವಿನಿ ಹೆಸರಲ್ಲಿ ಖರೀದಿ ಕರಾರು ಪತ್ರ ಮಾಡಿಕೊಟ್ಟಿದ್ದರು. ಆ ಬಳಿಕ ನಿವೇಶನವನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿತ್ತು.
ಈ ಬಗ್ಗೆ ಮಾಸ್ಟರ್ ಆನಂದ್ ವಿಚಾರಿಸಿದ್ದಾರೆ. ಆದರೆ ಆ ಬಳಿಕ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣ ಸಹ ವಾಪಸ್ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಆನಂದ್ ಅವರು ದೂರು ನೀಡಿದ್ದಾರೆ.