ನಂಜನಗೂಡು: ತಾಲ್ಲೂಕಿನ ಹೆಡಿಯಾಲ-ಬೇಗೂರು ಮುಖ್ಯರಸ್ತೆಯ ಇಂದಿರಾ ನಗರ ಸಮೀಪ ಗುರುವಾರ ಟಿಪ್ಪರ್ ಹರಿದು ೧೮ ಕುರಿಗಳು ಮೃತಪಟ್ಟಿದ್ದು, ೪೦ಕ್ಕೂ ಹೆಚ್ಚು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಮುರಳಿ ಎಂಬುವರಿಗೆ ಸೇರಿದ ಕುರಿಮಂದೆಯನ್ನು ಮೂವರು ಮೇವಿಗೆ ಸೂಕ್ತವಾದ ಸ್ಥಳವನ್ನು ಹುಡುಕಿಕೊಂಡು ತೆರಳುತ್ತಿದ್ದರು. ಬೆಳಿಗ್ಗೆ ಕುರಿಗಳನ್ನು ಮೇಯಲು ಕರೆದೊಯ್ಯುತ್ತಿದ್ದಾಗ ಗುಂಡ್ಲುಪೇಟೆಯಿಂದ ಹೆಡಿಯಾಲ ಕಡೆಗೆ ತೆರಳುತ್ತಿದ್ದ ಎಂ.ಸ್ಯಾಂಡ್ ತುಂಬಿದ್ದ ಟಿಪ್ಪರ್ ವೇಗವಾಗಿ ಕುರಿ ಮಂದೆ ಮೇಲೆ ಹರಿದಿದೆ. ಕುರಿಗಾಹಿ ಬೊಮ್ಮಣ್ಣ ಅವರಿಗೂ ಗಂಭೀರ ಗಾಯವಾಗಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಹುಲ್ಲಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.