ಮೈಸೂರು: ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸಿದ ನಂತರ ಗ್ರಾಮೀಣ ಸಹಕಾರಿ ಕ್ಷೇತ್ರಕ್ಕೆ ಒತ್ತು ದೊರೆತಿದೆ. ಪ್ರತಿ ಹಳ್ಳಿಯಲ್ಲಿ ೨ ಸಹಕಾರ ಸಂಘ ಮಾಡಬೇಕಿದೆ ಎಂದು ಸಹಕಾರ ಭಾರತೀಯ ರಾಷ್ಟ್ರೀಯ ಉಪಾಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು.
ಸಹಕಾರ ಭಾರತಿ- ಕರ್ನಾಟಕ ಜಿಲ್ಲಾ ಸಮಿತಿ ವತಿಯಿಂದ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್‍ಸ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಂಘಗಳನ್ನು ಕ್ರಿಯಾಶೀಲಗೊಳಿಸುವುದು, ತಂತ್ರeನ ಬಳಕೆ ಮಾಡಿಕೊಳ್ಳಬೇಕು. ಪೆಟ್ರೋಲ್ ಬೆಲೆ, ರೈತರ ಬೆಳೆಗಳನ್ನು ನ್ಯಾಯವಾದ ಬೆಲೆ ಕೊಟ್ಟು ಖರೀದಿ ಮಾಡುವುದು, ಗೋದಾಮು ನಿರ್ಮಾಣ ಹಾಗೂ ಸರ್ಕಾರ ಸವಲತ್ತು ಪಡೆಯಲು ಅವಕಾಶಗಳಿವೆ ಎಂದು ವಿವರಿಸಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಹಕಾರ ಕ್ಷೇತ್ರದಿಂದ ವಲಸೆ ತಪ್ಪಿದೆ. ಸುಸ್ಥಿರ ಬದುಕು ನಿರ್ಮಾಣಗೊಂಡಿದೆ. ಗ್ರಾಮೀಣ ಕುಟುಂಬಗಳಿಗೆ ಆದಾಯದ ಮೂಲವಾಗಿದೆ ಎಂದು ಹೇಳಿದರು. ಸಹಕಾರ ಸಚಿವಾಲಯ ಆರಂಭಕ್ಕೂ ಮುನ್ನ ನಮ್ಮ ಸಮಸ್ಯೆಗಳನ್ನು ಎಲ್ಲಿ ಹೇಳಿಕೊಳ್ಳಬೇಕು ಎಂದು ತಿಳಿದಿರಲಿಲ್ಲ. ಬಲಿಷ್ಠ ವ್ಯವಸ್ಥೆ ಇದ್ದರೂ ನೋಟು ಬದಲಾವಣೆ ವೇಳೆ ಇಕ್ಕಟ್ಟಿಗೆ ಸಿಲುಕಿತು. ಸಹಕಾರಿ ಬೆಳವಣಿಗೆ ಕುಂಠಿತವಾಯಿತು ಎಂದು ತಿಳಿಸಿದರು.
ಸಂಘಟನೆ ಒಳಗೆ ಶಿಸ್ತು ಪರಿಪೂರ್ಣವಾಗಿರಲಿಲ್ಲ. ಕಾನೂನಾತ್ಮಕ ಅಂಶಗಳ ಅರಿವಿರಲಿಲ್ಲ. ಆಳುವ ಸರ್ಕಾರಗಳಿಗೆ ಸಂಘಟನೆ ಬಲಿಷ್ಠವಾಗಿದ್ದರೆ ಮನವರಿಕೆ ಮಾಡಬಹುದು ಎಂಬುದು ಅರಿವಾದ ಮೇಲೆ ಸಂಘಟನೆ ಮಹತ್ವ ತಿಳಿಯಿತು ಎಂದರು.
ಯಾವುದೇ ಸರ್ಕಾರಗಳು ತಮ್ಮ ಮೂಗಿನ ನೇರಕ್ಕೆ ಕಾಯಿದೆ, ಕಾನೂನು ಮಾಡುತ್ತವೆ. ಸಹಕಾರಿಗಳಿಗೆ ಯಾವ ಸರ್ಕಾರದೊಂದಿಗೆ ಪರ ವಿರೋಧ ಇಲ್ಲ. ಎಲ್ಲರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದೆ. ಗ್ರಾಮೀಣ ಮಟ್ಟದಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.