ಯಳಂದೂರು: ತಾಲೂಕಿನ ಕೊಮಾರನಪುರ ಗ್ರಾಮಕ್ಕೆ ಗುಂಬಳ್ಳಿ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದ್ದು ಮತ್ತೆ ಇದಕ್ಕೆ ಇದೇ ಅನುದಾನವನ್ನು ವಾಪಸ್ಸು ತಂದು ೨ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಅವರು ತಾಲೂಕಿನ ಕೊಮಾರನಪುರ ಗ್ರಾಮದಲ್ಲಿ ಶನಿವಾರ ಎಲಿಮೆಂಟ್ ೧೪ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ರವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿರ್ಮಿಸಿಕೊಟ್ಟಿರುವ ೧೨ ಲಕ್ಷ ರೂ. ವೆಚ್ಚದ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಶಾಲೆಗೆ ಇಲ್ಲಿನ ನಿವಾಸಿಯಾಗಿರುವ ಮಂಜುನಾಥ್ ಎಲಿಮಂಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮ ಗ್ರಾಮದ ಶಾಲೆಗೆ ಕೊಠಡಿ ನಿರ್ಮಿಸಿರುವುದು ಇತರರಿಗೆ ಮಾದರಿಯಾಗಲಿ. ಯುವಕರು ಇಂತಹ ಸೇವಾ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಈ ಶಾಲೆಯ ೨ ಕೊಠಡಿಗಳು ಶಿಥಿಲವಾಗಿದ್ದು ಬೀಳುವ ಹಂತದಲ್ಲಿದೆ. ಇದನ್ನು ಕೆಡವಿ ಹೊಸ ಕೊಠಡಿ ನಿರ್ಮಾಣಕ್ಕೆ ೨೦ ಲಕ್ಷ ರೂ. ಹಣ ಬಿಡುಗಡೆಯಾಗಿದ್ದು ಈ ಕಾಮಗಾರಿಯೂ ಶೀಘ್ರದಲ್ಲೇ ಅರಂಭಗೊಳ್ಳಲಿದೆ. ಇದಲ್ಲದೆ ಯಳಂದೂರು ಪಟ್ಟಣದಲ್ಲಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ೩೫ ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಇದಕ್ಕೆ ಸಚಿವ ಸಂಪುಟದ ಅನುಮೋದನೆಯೂ ದೊರಕಿದ್ದು ಟೆಂಡರ್ ಪ್ರಕಿಯೆ ಆದ ಮೇಲೆ ಈ ಕಾಮಗಾರಿಯೂ ಆರಂಭಗೊಳ್ಳಲಿದೆ. ಪಟ್ಟಣದ ಬಳೇಪೇಟೆಯಿಂದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ಚೆಕ್ ಪೋಸ್ಟ್ ಬಳಿ ವರೆಗಿನ ರಸ್ತೆ ಅಭಿವೃದ್ಧಿಗೆ ೧೪ ಕೋಟಿ ರೂ. ಬಳೇಪೇಟೆಯಿಂದ ವೈ.ಕೆ.ಮೋಳೆ ಮಾರ್ಗವಾಗಿ ಚಂಗಚಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ೬ ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ಈ ಕಾಮಗಾರಿಗಳೂ ಆರಂಭವಾಗಲಿದೆ.
ಇದರೊಂದಿಗೆ ಯಳಂದೂರು ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ಕ್ರೀಡಾಂಗಣ ನಿರ್ಮಾಣ, ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೂ ಶ್ರಮ ವಹಿಸಲಾಗುವುದು. ಮುಖ್ಯಮಂತ್ರಿಗಳ ೨೫ ಕೋಟಿ ರೂ. ವಿಶೇಷ ಅನುದಾನವೂ ಕ್ಷೇತ್ರಕ್ಕೆ ಲಭ್ಯವಾಗಿದ್ದು ಇದನ್ನು ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲಾಗುವುದು. ಒಟ್ಟು ೧೦೦ ಕೋಟಿ ರೂ. ಗಳ ಅನುದಾನ ತರಲಾಗಿದೆ ಎಂದು ಮಾಹಿತಿ ನೀಡಿದರು.
ಎಲಿಮೆಂಟ್ ಹಣಕಾಸು ನಿಯಂತ್ರಕ ಗೋಪಾಲಕೃಷ್ಣ ಮರಳಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಪ್ರತಿ ಆರ್ಥಿಕ ವರ್ಷದಲ್ಲಿ ನಮ್ಮ ಲಾಭದ ಶೇ. ೨ ರಷ್ಟು ಹಣವನ್ನು ಸಮಾಜ ಸೇವೆಗಳಿಗಾಗಿ ಮೀಸಲಾಗಿಟ್ಟಿದೆ. ಇದರಲ್ಲಿ ಹೆಚ್ಚಿನ ಹಣವನ್ನು ಶಾಲೆಗಳ ಅಭಿವೃದ್ಧಿ, ವೈಜ್ಞಾನಿಕ ಪರಿಕರಗಳನ್ನು ನೀಡುವುದು, ಶಿಥಿಲ ಶಾಲಾ ಕಟ್ಟಡಗಳ ದುರಸ್ತಿ, ನೂತನ ಕೊಠಡಿ ನಿರ್ಮಾಣ, ಸ್ಮಾರ್ಟ್ ಕ್ಲಾಸ್‌ಗಳ ಪರಿಕರಗಳು ಸೇರಿದಂತೆ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ವರ್ಷವೂ ೫೦ ಲಕ್ಷ ರೂ. ಇದಕ್ಕೆ ಮೀಸಲಾಗಿರುತ್ತದೆ. ಈ ಬಾರಿ ಈ ಮೊತ್ತ ೬೦ ಲಕ್ಷ ರೂ. ಆಗಿದ್ದು ಇದರಲ್ಲೇ ೧೨ ಲಕ್ಷ ರೂ. ವೆಚ್ಚದಲ್ಲಿ ಕೊಮಾರನಪುರ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ರಾಪಂ ಅಧ್ಯಕ್ಷೆ ಮೀನಾ, ಉಪಾಧ್ಯಕ್ಷ ಶ್ರೀನಿವಾಸ್, ಬಿಇಒ ಕಾಂತರಾಜು, ಗುತ್ತಿಗೆದಾರ ಪುಟ್ಟರಾಜು ಸಿಪಿಐ ಶ್ರೀಕಾಂತ್, ಪಿಎಸ್‌ಐ ಹನುಮಂತ ಉಪ್ಪಾರ್ ಎಸ್‌ಡಿಎಂಸಿ ಅಧ್ಯಕ್ಷ ನಟರಾಜು, ಎಸ್. ರೇಚಣ್ಣ, ಶಾಲಾ ಮುಖ್ಯ ಶಿಕ್ಷಕ ಅನ್ವರ್ ಪಾಷ ಎಲಿಮೆಂಟ್ ಸಂಸ್ಥೆಯ ನಿವೇದಿತ, ಶ್ರೀದೇವಿ, ಮುರಳಿ ಸೇರಿದಂತೆ ಅನೇಕರು ಇದ್ದರು.