Wednesday, April 16, 2025
Google search engine

Homeರಾಜ್ಯಹಾಸನಾಂಬ ದರ್ಶನಕ್ಕೆ ೨೦ ಲಕ್ಷ ಭಕ್ತರ ಭೇಟಿ, ೧೨.೬೩ ಕೋಟಿ ಹಣ ಸಂಗ್ರಹ

ಹಾಸನಾಂಬ ದರ್ಶನಕ್ಕೆ ೨೦ ಲಕ್ಷ ಭಕ್ತರ ಭೇಟಿ, ೧೨.೬೩ ಕೋಟಿ ಹಣ ಸಂಗ್ರಹ

ಹಾಸನ: ಈ ಬಾರಿಯ ಹಾಸನಾಂಬ ದೇಗುಲದ ದರ್ಶನೋತ್ಸವದಲ್ಲಿ ದಾಖಲೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು, ಮೂಲಗಳ ಪ್ರಕಾರ ೨೦ ಲಕ್ಷಕ್ಕೂ ಅಧಿಕ ಜನರು ದೇವರ ದರ್ಶನ ಮಾಡಿದ್ದು, ಬರೋಬ್ಬರಿ ೧೨.೬೩ ಕೋಟಿ ಹಣ ಸಂಗ್ರಹವಾಗಿದೆ.

ಹುಂಡಿ ಎಣಿಕೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ, ಕಳೆದ ಹಲವು ವರ್ಷಗಳ ಹಾಸನಾಂಬ ದರ್ಶನೋತ್ಸವದಲ್ಲಿ ಸಂಗ್ರಹವಾದ ಆದಾಯದ ದುಪ್ಪಟ್ಟು ಆದಾಯ ಈ ಬಾರಿ ಬಂದಿದೆ ಎಂದರು.

ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡು ಮಾರಾಟದಿಂದ ೯,೬೭,೨೭,೧೮೦, ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಗಳಿಂದ ೨,೫೫,೯೭,೫೬೭ ಕೋಟಿ ಬಂದಿದೆ ಎಂದರು. ಈ ಬಾರಿ ೨೦.೪೦ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು ದರ್ಶನ ಪಡೆದಿದ್ದು, ನಿರೀಕ್ಷೆಗೂ ಮೀರಿ ಹುಂಡಿಯಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ. ನಾಲ್ಕು ವರ್ಷಗಳ ಹಿಂದೆ ಸುಮಾರು ೮.೫೦ ಕೋಟಿ ಸಂಗ್ರಹವಾಗಿರುವುದು ಇದುವರೆಗಿನ ದಾಖಲೆಯಾಗಿತ್ತು ಎಂದು ತಿಳಿಸಿದರು.

ಇದು ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವದ ಇತಿಹಾಸದಲ್ಲೇ ದಾಖಲೆ ಆದಾಯವಾಗಿದೆ. ಜಾತ್ರಾ ಮಹೋತ್ಸವ ಯಶಸ್ಸಿಗೆ ಸಹಕರಿಸಿದ ಎಲ್ಲ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

೫೦೦ಕ್ಕೂ ಹೆಚ್ಚಿಸಿ ಸಿಬ್ಬಂದಿಯಿಂದ ಎಣಿಕೆ: ಅಕ್ಟೋಬರ್ ೨೪ ರಿಂದ ನವೆಂಬರ್ ೩ ರವರೆಗೆ ನಡೆದ ಹಾಸನಾಂಬ ದರ್ಶನೋತ್ಸವ ಸಂದರ್ಭದಲ್ಲಿ ಭಕ್ತಾದಿಗಳು ನೀಡಿದ ಕಾಣಿಕೆ ಹಣವನ್ನು ಸೋಮವಾರ ಇಲ್ಲಿನ ಚನ್ನಕೇಶವ ಕಲ್ಯಾಣ ಮಂಟಪ ಆವರಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತೆ ಗೈಡ್ಸ್ ಕೆನರಾ ಹಾಗೂ ಐಡಿಬಿಐ ಬ್ಯಾಂಕ್ ಸಿಬ್ಬಂದಿ ಸೇರಿ ೫೦೦ ಕ್ಕೂ ಹೆಚ್ಚು ಸಿಬ್ಬಂದಿ ಎಣಿಕೆ ಮಾಡಿದರು.
ಬೆಳಿಗ್ಗೆ ೧೦ ಗಂಟೆಯಿಂದ ಪ್ರಾರಂಭವಾದ ಎಣಿಕೆ ಸಂಜೆ ವೇಳೆಗೆ ಮುಕ್ತಾಯವಾಗಿದೆ. ಸಿಸಿಟಿವಿ ಕ್ಯಾಮೆರಾ ಹಾಗೂ ಭದ್ರತೆಯೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು ಎಂದು ಮಾರುತಿ ತಿಳಿಸಿದರು.

ಕಾಣಿಕೆ ಹುಂಡಿಯಲ್ಲಿ ಚಿನ್ನದ ತಾಳಿ, ಕರಿಮಣಿ ಸರ, ದೇವರ ಅಚ್ಚು, ಬೆಳ್ಳಿಯ ತೊಟ್ಟಿಲು, ದೀಪ, ದೇವಿಗೆ ಹರಕೆಯಾಗಿ ಹಸ್ತ, ಕಣ್ಣು ಹಾಗೂ ಇತರೆ ಬೆಳ್ಳಿ ಆಭರಣ, ತಾಮ್ರ, ಹಿತ್ತಾಳೆ ಗಂಟೆ, ಬಿಂದಿಗೆ, ತ್ರಿಶೂಲ, ವಜ್ರ, ನಾನಾ ದೇಶದ ನೋಟು, ನಾಣ್ಯ, ರದ್ದಾದ ನೋಟುಗಳನ್ನು ಭಕ್ತರು ಸಲ್ಲಿಸಿದ್ದಾರೆ. ಎಣಿಕೆ ಕಾರ್ಯದಲ್ಲಿ ಸಂಗ್ರಹವಾದ ನೋಟುಗಳನ್ನು ಕೆನರಾ ಬ್ಯಾಂಕ್ ಸಿಬ್ಬಂದಿ, ಎಣಿಕೆ ಯಂತ್ರದಲ್ಲಿ ಪರಿಶೀಲಿಸಿದರು. ಹಣ ಎಣಿಕೆಗೆ ೨೨ಕ್ಕೂ ಹೆಚ್ಚು ಯಂತ್ರಗಳನ್ನು ಬಳಸಲಾಗಿದ್ದು, ವಿವಿಧ ಮುಖಬೆಲೆಯ ನೋಟುಗಳನ್ನು ಬಂಡಲ್‌ಗಳಾಗಿ ಕಟ್ಟಿ ಸಂಗ್ರಹ ಮಾಡಲಾಗಿದೆ.

ಈ ಬಾರಿಯೂ ಭಕ್ತರ ಕೋರಿಕೆಯ ಮಾಹಿತಿಯನ್ನು ನೀಡಲಾಗಿಲ್ಲ. ಪ್ರತಿ ವರ್ಷ ಭಕ್ತರು ತಮ್ಮ ಕೋರಿಕೆ ಪೂರೈಸುವಂತೆ ಹಾಸನಾಂಬೆ ದೇವಿಗೆ ಪತ್ರದಲ್ಲಿ ಬರೆದು ಹುಂಡಿಯಲ್ಲಿ ಹಾಕುತ್ತಿದ್ದಾರೆ. ಆದರೆ ಅದರಲ್ಲಿನ ಭಕ್ತರ ಕೋರಿಕೆಯ ವಿಷಯ ಬಹಿರಂಗ ಆಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಭಕ್ತರ ಮನವಿ ಬಹಿರಂಗಪಡಿಸದೇ ಸಂಗ್ರಹಿಸುವುದಾಗಿ ಮಾರುತಿ ತಿಳಿಸಿದ್ದಾರೆ. ಹುಂಡಿ ಎಣಿಕೆ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ದೇವಸ್ಥಾನ ಆಡಳಿತಾಧಿಕಾರಿ ಮಾರುತಿ ತಹಶೀಲ್ದಾರ್ ಮಮತಾ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದರು.

ಹಾಸನಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ವಿಶೇಷ ದೀಪಾಲಂಕಾರ ವೀಕ್ಷಿಸಲು ಡಬಲ್ ಡೆಕ್ಕರ್ ಬಸ್ ವ್ಯವಸ್ಥೆ ಮಾಡಲಾಗಿತ್ತು. ಬಸ್ ಮೇಲ್ಭಾಗದಲ್ಲಿ ೪೫೯ ಪುರುಷರು ೬೨೮ ಮಹಿಳೆಯರು ೪೨೬ ಮಕ್ಕಳು ಬಸ್ ಕೆಳಭಾಗದಲ್ಲಿ ೧೬ ಪುರುಷರು ೧೫ ಮಹಿಳೆಯರು ೪ ಮಕ್ಕಳು ಸೇರಿದಂತೆ ಒಟ್ಟು ೧೫೪೮ ಜನರು ಪ್ರಯಾಣಿಸಿ ದೀಪಾಲಂಕಾರ ವೀಕ್ಷಿಸಿದ್ದಾರೆ.

೪ ಟೂರ್ ಪ್ಯಾಕೇಜ್‌ಗಳಲ್ಲಿ ಸಕಲೇಶಪುರ ಮಾರ್ಗದಲ್ಲಿ ೭೬ ಪುರುಷರು ೧೩೧ ಮಹಿಳೆಯರು ೩೩ ಮಕ್ಕಳು ಸೇರಿದಂತೆ ೨೪೦ ಜನರು ಪ್ರವಾಸ ಮಾಡಿದ್ದಾರೆ. ಬೇಲೂರು-ಹಳೇಬೀಡು ಮಾರ್ಗದಲ್ಲಿ ೩೧ ಪುರುಷರು ೫೯ ಮಹಿಳೆಯರು ೧೦ ಮಕ್ಕಳು ಸೇರಿದಂತೆ ೧೦೦ ಮಂದಿ ಪ್ರವಾಸ ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ತಿಪ್ಪೇಸ್ವಾಮಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular