ಬೆಂಗಳೂರು: ನಾನು ಇಲ್ಲಿಯವರೆಗೆ ಸುಮಾರು 12 ಚುನಾವಣೆಗಳನ್ನು ಗೆದ್ದಿದ್ದೇನೆ. ಅಲ್ಲಿಯವರೆಗೆ ಯಾವುದೇ ಚುನಾವಣೆಗಳಲ್ಲೂ ಸೋಲದ ನಾನು 2019ರ ಲೋಕಸಭಾ ಚುನಾವನೆಯಲ್ಲಿ ಮೊದಲ ಬಾರಿ ಸೋತೆ. ಇದಕ್ಕೆ ಬಿಜೆಪಿ ನಡೆಸಿದ ಮತಗಳ್ಳತನವೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗದ ಮತಗಳ್ಳತನ ವಿರೋಧಿಸಿ ಕಾಂಗ್ರೆಸ್ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ನಾನು 2019ರಲ್ಲೇ ಬಿಜೆಪಿ ಅಕ್ರಮ ಮಾಡಿದೆ ಎಂದು ಹೇಳಿದ್ದೆ. ನಾನು ನನ್ನ ಜೀವನದಲ್ಲಿ ಸೋಲು ಕಂಡಿದ್ದು ಅದು ಒಂದೇ ಚುನಾವಣೆಯಲ್ಲಿ. 2019ರಲ್ಲಿ ನಾನು ಮೊದಲ ಬಾರಿ ಸೋತಾಗಲೂ ಬಿಜೆಪಿಯವರು ಇದೇ ರೀತಿ ಅಕ್ರಮ ಮಾಡಿದ್ದರು. ಆದರೆ ನಮಗೆ ಆಗ ನಿಜ ಗೊತ್ತಾಗಿರಲಿಲ್ಲ. ಈಗ ಎಲ್ಲಾ ಸತ್ಯ ಹೊರಬರುತ್ತಿದೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಇರುವುದು ಕಳ್ಳತನದ ಸರ್ಕಾರ. ನೈತಿಕ ಬಲ ಇಲ್ಲದೆ ಅವರಿಗೆ ಸರ್ಕಾರ ನಡೆಸುವ ಹಕ್ಕು ಇಲ್ಲ. ದೇಶದಲ್ಲಿ ಸಂವಿಧಾನ ಉಳಿಸಬೇಕು, ವಯಸ್ಕರ ಮತದಾನದ ಹಕ್ಕನ್ನು ಉಳಿಸಬೇಕು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂಬ ಪ್ರಯತ್ನ ನಮ್ಮದು. ಆದರೆ ಮೋದಿ ಅವರ ಪ್ರಯತ್ನ, ಜನ ಓಟ್ ಕೊಡದಿದ್ದರೂ ಆ ಓಟ್‌ಗಳನ್ನು ಕಳ್ಳತನ ಮಾಡುವುದು. ಚುನಾವಣಾ ಆಯೋಗಕ್ಕೂ ಒತ್ತಡ ತಂದು ಅಕ್ರಮ ಮಾಡಿದ್ದಾರೆ. ಆದರೆ ಮೋದಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡಿತ್ತಿದೇನೆ ಎಂದು ಹೇಳುತ್ತಿದ್ದಾರೆ. ಇದು ಅಪ್ಪಟ ಸುಳ್ಳು ಎಂದು ಪ್ರತಿಪಾದಿಸಿದರು.
ಈಗಾಗಲೇ ರಾಹುಲ್ ಗಾಂಧಿ ಬಹಳ ಸ್ಪಷ್ಟವಾಗಿ 2024ರ ಲೋಕಸಭಾ ಚುನಾವನೆಯಲ್ಲಿ ಮೋದಿ ಓಟ್ ಕಳ್ಳತನ ಮಾಡಿ ಈ ದೇಶದ ಪ್ರಧಾನಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ರಾಹುಲ್ ವಿಶೇಷವಾಗಿ ಸೆಂಟ್ರಲ್ ಬೆಂಗಳೂರು ಅಸೆಂಬ್ಲಿ ಕ್ಷೇತ್ರವನ್ನು ಆಯ್ಕೆ ಮಾಡಿ, ಸುಮಾರು 6,60,000 ಮತದಾರರ ಎಲ್ಲಾ ಮಾಹಿತಿಗಳನ್ನು ಕೇವಲ ಆರು ತಿಂಗಳಲ್ಲಿ ಅಭ್ಯಾಸ ಮಾಡಿ ದ್ರೋಹ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದರು.
ನಮ್ಮ ಪಕ್ಷ ಎಲ್ಲಾ ರಾಜ್ಯಗಳಲ್ಲೂ ಇಂತಹ ತಪ್ಪುಗಳನ್ನು ಹುಡುಕಿ ತೆಗೆಯುವ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರದಲ್ಲೂ ಮಾಡಿದೇವೆ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶದಲ್ಲೂ ಈ ಅಕ್ರಮವನ್ನು ನಡೆಸಿ ಮೋದಿ ಈಗ ದೇಶ ಆಳುತ್ತಿದ್ದಾರೆ. ಅವರು ಐದೈದು ಕ್ಷೇತ್ರಗಳಲ್ಲಿ ಬೋಗಸ್ ಓಟಿಂಗ್ ಮಾಡಿ ನಮ್ಮನ್ನು ಸೋಲಿಸೋ ಪ್ರಯತ್ನ ಮಾಡಿದ್ದಾರೆ. ಆದರೆ ಈಗ ಎಲ್ಲಾ ಬಯಲಿಗೆ ಬಂದಿದೆ. ರಾಹುಲ್ ಹಾಗೂ ಕಾಂಗ್ರೆಸ್ ಅವರ ಎಲ್ಲಾ ಅಕ್ರಮ ಕೆಲಗಳನ್ನು ಹೊರಗಡೆ ತಂದಿದ್ದಾರೆ ಎಂದು ಹೇಳಿದರು.
ಮೋದಿ ಈಗಾಗಲೇ ಅನೇಕ ಕಾಂಗ್ರೆಸ್ ಕಾರ್ಯಕರ್ತರಿಗೆ ಹೆದರಿಸಿ, ಬೆದರಿಸಿ, ಇಡಿ, ಸಿಬಿಐ ತಂಡಗಳನ್ನು ಮಧ್ಯೆ ತಂದು ಹೆದರಿಸುವ ಕೆಲಸ ಮಾಡಿದ್ದಾರೆ. ಅನೇಕ ರಾಜ್ಯಗಳಲ್ಲಿ ಮೆಜಾರಿಟಿ ಅವರಿಗೆ ಇರಲಿಲ್ಲ. ಆದರೂ ಕೂಡಾ ಪಕ್ಷಗಳನ್ನು ಒಡೆದು ಎಂಎಲ್‌ಎ ಗಳನ್ನು ಖರೀದಿ ಮಾಡಿ ಸರ್ಕಾರ ಮಾಡಿದ್ದಾರೆ. ಎಲ್ಲಾ ಕಡೆ ಅವರು ನ್ಯಾಯಯುತವಾಗಿ ಗೆದ್ದಿಲ್ಲ. ಚುನಾವಣೆಯಲ್ಲಿ ಗೆದ್ದವರನ್ನು ಸೆಳೆದುಕೊಂಡು ಬಂದು ದುಡ್ಡು ಕೊಟ್ಟು ಸರ್ಕಾರಗಳನ್ನು ಮಾಡಿದರು. ಈಗಲೂ ಅದೇ ಚಾಳಿ ಅವರಿಗಿದೆ. ಅವರಿಗೆ ಬುದ್ದಿ ಕಲಿಸಬೇಕಿದೆ ಎಂದು ಗುಡುಗಿದರು.
ಮೋದಿ ಆಂಡ್ ಕಂಪನಿ ಗೆದ್ದಿಲ್ಲ… ಕಳ್ಳತನದಿಂದ ಚುನಾವಣೆ ಗೆದ್ದಿದ್ದಾರೆ. ಅವರ ಸರ್ಕಾರ ಹೆಚ್ಚು ದಿನ ಉಳಿಯಲ್ಲ. ದೇಶದ ಆರ್ಥಿಕ ವ್ಯವಸ್ಥೆ ಕೆಡಿಸುತ್ತಿದ್ದಾರೆ. ದೇಶದಲ್ಲಿ ಜನ ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ದೇಶ ಬರ್ಬಾದ್ ಮಾಡಿದ್ದಾರೆ. ಈಗ ಮತ್ತೊಂದು ತಪ್ಪು ಮಾಡಿ ದೇಶ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.